`ಪಂಚಮುಖಿ’ ನೆರವಿಗೆ ಶೇ.5ರ ಅನುದಾನ ಬಳಕೆಯಾಗಲಿ

ದಾವಣಗೆರೆ, ಫೆ. 11 – ವಿವಿಧ ಇಲಾಖೆಗಳ ಶೇ.5ರ ಅನುದಾನದ ಹಣವನ್ನು ವಿಶೇಷಚೇತನರಿಗೆ ವಾಹನ ಇತ್ಯಾದಿ ಸಲಕರಣೆಗಳ ವಿತರಣೆಗೆ ಬಳಸಬಾರದು. ಈ ಹಣವನ್ನು ಅವರಿಗೆ `ಪಂಚಮುಖಿ’ ನೆರವು ಒದಗಿಸಲು ಬಳಸಬೇಕು ಎಂದು ವಿಶೇಷಚೇತನರ ಇಲಾಖೆ ಮಾಜಿ ರಾಜ್ಯ ಆಯುಕ್ತ ರಾಜಣ್ಣ ಹೇಳಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಮತ್ತು ಸ್ಫೂರ್ತಿ ಸಂಸ್ಥೆ, ದಾವಣಗೆರೆ ಇವುಗಳ ಸಂಯುಕ್ತಾಶ್ರಯದಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಶೇ.5ರ ಅನುದಾನದಡಿಯಲ್ಲಿ ವಿಶೇಷ ಚೇತನರ ಕಲ್ಯಾಣ ನಿಧಿಯ ಕ್ರಿಯಾ ಯೋಜನೆ ಹಾಗೂ ಅಡೆ – ತಡೆ ರಹಿತ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ವಿಶೇಷಚೇತನರನ್ನು ವೈದ್ಯಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಬಲವರ್ಧನೆ ಎಂಬ ಐದು ಅಂಶಗಳ ಮೂಲಕ ಸಶಕ್ತರಾಗಿರಬೇಕಿದೆ. ಇದಕ್ಕಾಗಿ ಶೇ.5ರ ಅನುದಾನ ಬಳಕೆಯಾಗಬೇಕು ಎಂದರು.

ಸಂಸದರು ಹಾಗೂ ಶಾಸಕರ ಅನುದಾನದಲ್ಲಿ ವರ್ಷಕ್ಕೆ 48 ಕೋಟಿ ರೂ.ಗಳು ವಿಶೇಷಚೇತನರಿಗೆ ಲಭ್ಯವಿದೆ. ಈ ಹಣವನ್ನು ಸಾಧನ ಸಲಕರಣೆಗಳ ವಿತರಣೆಗೆ ಬಳಸಬೇಕು ಎಂದವರು ಅಧಿಕಾರಿಗಳಿಗೆ ತಿಳಿಸಿದರು.

ವಿಶೇಷಚೇತನರು ತಮ್ಮ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಬೇಕಾದರೆ ಸಂಘಟಿತರಾಗುವುದು ಅನಿವಾರ್ಯ. ಸಂಘಟಿತರಾದಲ್ಲಿ ಮಾತ್ರ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಸಾಧ್ಯ ಎಂದು ರಾಜಣ್ಣ ಹೇಳಿದರು.

ವಿಶೇಷಚೇತನರ ಆರೈಕೆ ಮಾಡುವವರಲ್ಲಿ ಶೇ.92ರಷ್ಟು ಮಹಿಳೆಯರೇ ಆಗಿದ್ದಾರೆ. ಇವರು ಜಿಲ್ಲಾ ಕೇಂದ್ರಗಳಿಗೆ ಬರಲು ತಾತ್ಕಾಲಿಕ ಬಸ್ ಪಾಸ್ ಕೊಡಬೇಕು ಎಂಬ ಬೇಡಿಕೆ ಸಾಕಷ್ಟು ವರ್ಷಗಳಿಂದ ಬಾಕಿ ಇದೆ. ಕೇವಲ 2.5-3 ಲಕ್ಷದಷ್ಟಿದ್ದ ಇವರಿಗೆ ಉಚಿತ ಬಸ್ ಪಾಸ್ ಸಿಕ್ಕಿರಲಿಲ್ಲ. ಆದರೆ, ಸರ್ಕಾರ ಈಗ ರಾಜ್ಯದ 3 ಕೋಟಿಗೂ ಹೆಚ್ಚು ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಒದಗಿಸಿದೆ. ಸಂಘಟಿತರಾಗಿ ಬೇಡಿಕೆ ಮನದಟ್ಟು ಮಾಡಿಕೊಡಬೇಕು ಎಂಬುದಕ್ಕೆ ಇದೇ ಉದಾಹರಣೆ ಎಂದವರು ತಿಳಿಸಿದರು.

ಈ ಹಿಂದೆ ವಿಶೇಷಚೇತನರಿಗಾಗಿ ರಾಜ್ಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿತ್ತು. ಈಗ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಯೋಜನೆ ರೂಪಿಸಲು ಅಧಿಕಾರ ನೀಡಲಾಗಿದೆ ಎಂದೂ ಅವರು ಹೇಳಿದರು.

error: Content is protected !!