ಭಾನುವಳ್ಳಿ : ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ ಜಿಲ್ಲಾಡಳಿತ, ನಿಷೇದಾಜ್ಞೆ ಜಾರಿ

ಭಾನುವಳ್ಳಿ : ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ ಜಿಲ್ಲಾಡಳಿತ, ನಿಷೇದಾಜ್ಞೆ ಜಾರಿ

ಮಲೇಬೆನ್ನೂರು, ಜ. 23- ಭಾನುವಳ್ಳಿ ಗ್ರಾಮದ ಮದಕರಿ ನಾಯಕ ಮಹಾಧ್ವರದ ಪಕ್ಕದಲ್ಲೇ ಅನಧಿಕೃತವಾಗಿ ಪ್ರತಿಷ್ಠಾಪಿಸಿದ್ದ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ ತೆರವುಗೊಳಿಸಿದೆ.

ಬೆಳ್ಳಂಬೆಳಗ್ಗೆಯೇ ಭಾರೀ ಪೊಲೀಸ್‌ ಭದ್ರತೆಯಲ್ಲಿ ಮತ್ತು ಅಪರ ಜಿಲ್ಲಾಧಿಕಾರಿ ಲೋಕೇಶ್‌, ಉಪವಿಭಾಗಾಧಿಕಾರಿ ಶ್ರೀಮತಿ ದುರ್ಗಾಶ್ರೀ, ತಹಶೀಲ್ದಾರ್‌ ಗುರುರಾಜ್‌, ಎಎಸ್ಪಿ ಸಂತೋಷ್‌, ವಿಜಯಕುಮಾರ್‌, ಡಿವೈಎಸ್ಪಿ ಬಸವರಾಜ್‌ ಅವರ ಸಮ್ಮುಖದಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ತೆರವುಗೊಳಿಸಿ ಹರಿಹರ ತಾ.ಪಂ. ಕಛೇರಿಗೆ ಕಳುಹಿಸಿಕೊಡಲಾಯಿತು.

6 ಸಿಪಿಐ – 10 ಪಿಎಸ್‌ಐ, 15 ಎಎಸ್‌ಐ, 40 ಪೊಲೀಸ್‌ ಸಿಬ್ಬಂದಿ ಮತ್ತು ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಮೀಸಲು ಪಡೆ ಪೊಲೀಸ್‌, ಕ್ಯೂಆರ್‌ಟಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅಲ್ಲದೆ ತಹಶೀಲ್ದಾರ್ ಗುರುಬಸವರಾಜ್‌ ಅವರು ಮುಂಜಾಗ್ರತಾ ಕ್ರಮವಾಗಿ ಜ. 25 ರವರೆಗೆ ಗ್ರಾಮದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ಇದೇ ತಿಂಗಳ 8ರ ಸೋಮವಾರ ತಡರಾತ್ರಿ ಮದಕರಿ ನಾಯಕ ಮಹಾಧ್ವರದ ಪಕ್ಕದಲ್ಲಿರುವ ವ್ಯಕ್ತಿಯೊಬ್ಬರ ಜಾಗದಲ್ಲಿ ಅನಧಿಕೃತವಾಗಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣನವರ ಸಣ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಬೆಳಿಗ್ಗೆ ಇದನ್ನು ನೋಡಿದ ನಾಯಕ ಸಮಾಜದವರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಷಯ ತಿಳಿದ ತಕ್ಷಣ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದಿನವಿಡೀ ಪ್ರತಿಭಟನಾ ಕಾರರ ಮನವೊಲಿಸಿ ರಸ್ತೆ ತಡೆ ತೆರವು ಮಾಡಿಸಿದ್ದರು. ನಂತರ ಅವರ ರಸ್ತೆ ಪಕ್ಕದಲ್ಲೇ ಅನಿರ್ದಿಷ್ಠಾವಧಿಯ ಧರಣಿ ಸತ್ಯಾಗ್ರಹ ಆರಂಭಿಸಿ, ಪ್ರತಿಮೆ ತೆರವು ಮಾಡಿಸುವಂತೆ ಪಟ್ಟುಹಿಡಿದರು.

ಈ ವಿಷಯ ತಿಳಿದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಅವರು ಭಾನುವಳ್ಳಿ ಗ್ರಾಮದ ಎರಡೂ ಸಮಾಜದವರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿದರು.

ಸಭೆಯಲ್ಲಿ ಅಂತಿಮವಾಗಿ ಜಿಲ್ಲಾಧಿಕಾರಿಗಳು ಅನಧಿಕೃತವಾಗಿ ಪ್ರತಿಮೆ ಇಟ್ಟಿರುವುದರಿಂದ 10 ದಿನಗಳೊಳಗಾಗಿ ತೆರವು ಮಾಡುವಂತೆ ಕುರುಬ ಸಮಾಜದವರಿಗೆ ಸೂಚನೆ ನೀಡಿದ್ದರು. 

ಆ ಪ್ರಕಾರ 10 ದಿನ ಕಳೆದರೂ ಪ್ರತಿಮೆಯನ್ನು ತೆರವುಗೊಳಿಸದಿದ್ದಾಗ ಜಿಲ್ಲಾಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಲು ಸೂಚಿಸಿದ್ದರು ಎನ್ನಲಾಗಿದೆ.

ಆಕ್ರೋಶ : ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಏಕಾಏಕಿ ತೆರವುಗೊಳಿಸಿದ್ದರ ವಿರುದ್ಧ ಕುರುಬ ಸಮಾಜದ ಯುವಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಆಗ ಸ್ವಲ್ಪ ಜನರನ್ನು ಪೊಲೀಸರು ವಶಕ್ಕೆ ಪಡೆದರು.

ನಂತರ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿದ ಅಧಿಕಾರಿಗಳು, ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಾನೂನು ಉಲ್ಲಂಘನೆ ಮಾಡಬೇಡಿ, ನೀವು ಜಿಲ್ಲಾಡಳಿತದ ಅನುಮತಿ ಪಡೆದು ಪ್ರತಿಮೇ ಪ್ರತಿಷ್ಠಾಪಿಸಿಕೊಳ್ಳಲು ಅವಕಾಶ ಇದೆ ಎಂದು ಕುರುಬ ಸಮಾಜದ ಯುವಕರಿಗೆ ಮನವರಿಕೆ ಮಾಡಿಕೊಟ್ಟರು. 

ಈ ವೇಳೆ ಮಾತನಾಡಿದ ಯು.ಕೆ. ಅಣ್ಣಪ್ಪ, ಹೆಚ್‌.ಕೆ. ಕನ್ನಪ್ಪ, ಹೇಮಂತ್‌ ಅವರು ಜಿಲ್ಲಾಡಳಿತ ಏಕಪಕ್ಷೀಯವಾಗಿ ನಡೆದುಕೊಂಡಿದೆ. ನಾವು ನಮ್ಮ ಸ್ವಂತ ಜಾಗದಲ್ಲಿ ಪ್ರತಿಮೆ ಇಟ್ಟಿದ್ದೆವು. ಇದರಿಂದ ಯಾರಿಗೂ ತೊಂದರೆ ಇದ್ದಿಲ್ಲ. ಆದರೂ ಒಂದು ಸಮಜಾದ ಒತ್ತಡಕ್ಕೆ ಮಣಿದು ಪ್ರತಿಮೆ ತೆರವುಗೊಳಿಸಿರುವುದು ನಮಗೆ ಬೇಸರ ತಂದಿದೆ. ನಾವು ಮುಂದೆ ಕಾನೂನು ಪ್ರಕಾರವೇ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತೇವೆ ಎಂದರು.

error: Content is protected !!