ಹರಿಹರ, ಜ. 23 – ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ನಗರದ ತಾಲ್ಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ತಾಲ್ಲೂಕಿನ ಕಡ್ಲೆಗೊಂದಿ ಮತ್ತು ಭಾನುವಳ್ಳಿ ಗ್ರಾಮಗಳ ನಿರ್ವಸತಿಕರು ಮಂಗಳವಾರದಂದು ಧರಣಿ, ಸ್ಥಳದಲ್ಲೆ ಅಡುಗೆ ಮಾಡುವ ಮೂಲಕ ಆಡಳಿತಗಾರರ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಒಲೆ ಹಚ್ಚಿದ ಪ್ರತಿಭಟನಾ ನಿರತ ಮಹಿಳೆಯರು ಸ್ಥಳದಲ್ಲೆ ಜೋಳದ ರೊಟ್ಟಿ, ಅನ್ನ, ಸಾಂಬಾರು ಸಿದ್ಧಗೊಳಿಸಿ ಸೇವನೆ ಮಾಡಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಈ ಎರಡೂ ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ಸಮುದಾಯದ ಬಡ ಕುಟುಂಬದವರು ಅತ್ಯಂತ ಚಿಕ್ಕ ಮನೆಗಳಲ್ಲಿ ಹಲವು ದಶಕಗಳಿಂದ ಬದುಕುತ್ತಿದ್ದಾರೆ.
ಸಂಘಟನೆ ನೇತೃತ್ವದಲ್ಲಿ ಕಳೆದ 29 ದಿನಗಳಿಂದ ಬಿಸಿಲು, ಧೂಳಿನಲ್ಲಿ ಮಹಿಳೆ, ಮಕ್ಕಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಆದರೆ ತಾಲ್ಲೂಕು ಆಡಳಿತ ಸಮಸ್ಯೆ ಪರಿಹಾರಕ್ಕೆ ತೋರಿಕೆಯ ಪ್ರಕ್ರಿಯೆಗಳನ್ನು ಮಾತ್ರ ಮಾಡುತ್ತಾ ಸಮಯ ಕಳೆಯುತ್ತಿದೆ.
ಬಡವರ ಸಂಕಷ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ದೃಷ್ಟಿಯಿಂದ ಇಂದು ಸ್ಥಳದಲ್ಲೇ ಅಡುಗೆ ಮಾಡಿ ಸೇವನೆ ಮಾಡಿ ದ್ದೇವೆ, ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇ ರಿಗೆ ಘೇರಾವು, ಹರಿಹರ ಬಂದ್, ರಸ್ತೆ ತಡೆ, ಜೈಲ್ ಭರೋನಂತಹ ಉಗ್ರ ಚಳುವಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಕಡ್ಲೆಗೊಂದಿ ಗ್ರಾ.ಪಂ. ಸದಸ್ಯೆ ಮಾತೆಂಗೆಮ್ಮ ತಿಮ್ಮಪ್ಪ, ಎಸ್.ಟಿ. ಹನುಮಂತಪ್ಪ, ಜ್ಯೋತಿ, ಶೈಲ, ಸುನೀತಾ ಸಂಜೀವಪ್ಪ, ರುಕ್ಮಿಣಿ, ಮಾಗೋಡು ಹನುಮಕ್ಕ, ಶಾಂತಮ್ಮ, ಮುಬೀನಾ, ಮಲ್ಲಮ್ಮ, ಗುಡ್ಡಪ್ಪ, ಪರುಶುರಾಮ, ಮರಿಯಮ್ಮ, ಕೊಟ್ರೇಶ್, ಶಂಷಾದ್, ಮುಬೀ ನಾಬಾನು, ಗಂಗಮ್ಮ, ಶಾಹತಾಜ್ ಬಾನು, ಪುಷ್ಪ, ಶಕುಂತಲಾ, ಭಾಗ್ಯಮ್ಮ, ಮಲ್ಲಮ್ಮ, ರತ್ನಮ್ಮ, ನಾಗಮ್ಮ, ಹನುಮಕ್ಕ ಹಾಗೂ ಇತರರಿದ್ದರು.