ಎಲ್.ಜಿ. ಮಧುಕುಮಾರ್ ಸಂತಸ
ದಾವಣಗೆರೆ, ಜ. 22 – ಹನ್ನೆರಡನೆ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಲು ಮಹತ್ತರ ಕೊಡುಗೆ ನೀಡಿ, ಕಲ್ಯಾಣ ಕ್ರಾಂತಿಯ ಮೂಲಕ ಸಮಾನತೆಯ ಆಶಯವನ್ನು ಎತ್ತಿ ಹಿಡಿದ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಸಂತಸ ತಂದಿದೆ ಎಂದು ಕನ್ನಡಪರ ಚಿಂತಕ ಹಾಗೂ ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ತಿಳಿಸಿದರು. ಜಾತ್ಯತೀತ ಪರಿಕಲ್ಪನೆ ಅಡಿಯಲ್ಲಿ ಸಮ ಸಮಾಜದ ಕನಸನ್ನು ಸಾಕಾರಗೊಳಿಸಲು ಶ್ರಮಿಸಿದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಹಿತ್ಯದಲ್ಲಿ ಸರಳತೆಯನ್ನು ತಂದು ಜನಸಾಮಾನ್ಯರನ್ನು ತಲುಪಿದ್ದವರು.ಬಸವಣ್ಣನವರ ಸಾಮಾಜಿಕ ಕೊಡುಗೆಗಳನ್ನು ಪರಿಗಣಿಸಿ, ಕೋಟ್ಯಾಂತರ ಬಸವ ಅನುಯಾಯಿಗಳ ಒತ್ತಾಸೆಯಂತೆ ಕರ್ನಾಟಕ ಸರ್ಕಾರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.