ಬೇಸಾಯ ತಜ್ಞ ಮಲ್ಲಿಕಾರ್ಜುನ ಅಭಿಪ್ರಾಯ
ಚನ್ನಗಿರಿ, ಜ. 16 – ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ದಾವಣಗೆರೆ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಶಿವಮೊಗ್ಗ), ಕೃಷಿ ವಿಜ್ಞಾನ ಕೇಂದ್ರ (ಉಡುಪಿ) ಹಾಗೂ ಕೃಷಿ ಸಂಶೋಧನಾ ಕೇಂದ್ರ (ಕತ್ತಲಗೆರೆ) ಇವರ ಸಂಯುಕ್ತ ಆಶ್ರಯದಲ್ಲಿ ಡ್ರೋನ್ ಮುಖಾಂತರ ಕಡಲೆ ಬೆಳೆಗೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷಿಕೆಯನ್ನು ಚನ್ನಗಿರಿ ತಾಲ್ಲೂಕಿನ ಭೀಮನೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಸ್ತರಣಾ ನಿರ್ದೇಶಕ ಡಾ. ಗುರುಮೂರ್ತಿ ಮಾತನಾಡಿ, ಕೃಷಿಯಲ್ಲಿ ಡ್ರೋನ್ ಬಳಕೆ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ್ ಟಿ.ಎನ್. ಮಾತನಾಡಿ, ಡ್ರೋನ್ ಮೂಲಕ ಔಷಧಿ ಸಿಂಪಡಣೆಯ ಪ್ರಾತ್ಯಕ್ಷಿಕೆಯ ಲಾಭವನ್ನು ರೈತರು ಪಡೆದುಕೊಳ್ಳುವುದರ ಜೊತೆಗೆ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಬಿ. ಓ. ಮಾತನಾಡಿ, ಡ್ರೋನ್ ಬಳಕೆ ಯಿಂದ ರೈತರಿಗೆ ಸಮಯ ಮತ್ತು ನೀರಿನ ಉಳಿತಾಯವನ್ನು ಮಾಡುವುದರ ಜೊತೆಗೆ ಕೂಲಿ ಆಳುಗಳ ಸಮ ಸ್ಯೆಗೆ ಒಂದು ಪರಿಹಾರ ವಾಗುತ್ತದೆ. ಒಂದು ಎಕರೆ ಪ್ರದೇಶವನ್ನು 10 ರಿಂದ 15 ನಿಮಿಷಗಳಲ್ಲಿ ಡ್ರೋನ್ ಸಿಂಪರಣೆ ಮಾಡುವುದರಿಂದ ರೈತರಿಗೆ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಡಲೆ ಬೆಳೆಗೆ ಪ್ರಾತ್ಯಾಕ್ಷಿಕೆ ಮೂಲಕ ಔಷಧಿ ಸಿಂಪರಣೆ ಮಾಡಲಾಗುತ್ತದೆ.
ಕೃಷಿ ವಿಜ್ಞಾನ ಕೇಂದ್ರ, ಉಡುಪಿಯ ಡಾ. ನವೀನ್ ಮಾತನಾಡಿ, ಪ್ರಸ್ತುತ ಕಡಲೆ ಬೆಳೆಗೆ ಕಡಲೆ ಮ್ಯಾಜಿಕ್ ಮತ್ತು ಬೇವಿನ ಕೀಟನಾಶಕವನ್ನು ಸಿಂಪರಣೆ ಮಾಡುವುದು ಸೂಕ್ತ ಎಂದರು. ಡ್ರೋನ್ ಮೂಲಕ ಸಿಂಪರಣೆ ಮಾಡುವ ಮೊದಲು ತಜ್ಞರನ್ನು ವಿಚಾರಿಸುವುದು ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ್ಯ, ಡಾ. ಬಿರಾದಾರ್ ಹಾಗೂ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.