10 ರೂಪಾಯಿ ನೋಟುಗಳ ಕೊರತೆಯೂ ಮತ್ತು ಚಲಾವಣೆಯಾಗದ ನಾಣ್ಯಗಳು…!

10 ರೂಪಾಯಿ ನೋಟುಗಳ ಕೊರತೆಯೂ  ಮತ್ತು ಚಲಾವಣೆಯಾಗದ ನಾಣ್ಯಗಳು…!

ಈ ಹಿಂದೆಲ್ಲಾ ಅನೇಕ ಬಾರಿ ಚಿಲ್ಲರೆ ನಾಣ್ಯಗಳ ಸಮಸ್ಯೆಯನ್ನು ನಾವು ಕಾಣುತ್ತಿದ್ದೆವು. ಆದರೆ ಈಗ 10 ಮತ್ತು 20 ರೂ. ಮುಖ ಬೆಲೆಯ ನೋಟುಗಳ ಸಮಸ್ಯೆ ಕಾಡತೊಡಗಿದೆ.

ಅದರಲ್ಲಿಯೂ 10 ರೂ. ನೋಟುಗಳು ಒಂದು ರೀತಿ ಸಂಪೂರ್ಣವಾಗಿ ಕಾಣೆಯಾಗಿರುವಂತೆ ಭಾಸವಾಗುತ್ತದೆ. ಇದ್ದರೂ ಆ ನೋಟುಗಳು ತೀರಾ ಹಾಳಾಗಿ ಚಲಾವಣೆಗೆ ಯೋಗ್ಯವಿಲ್ಲದಂತಾಗಿವೆ. ಹಾಗಾಗಿ ಈ ಹರಕು ನೋಟುಗಳನ್ನು ಅಂಗಡಿ ಮುಂಗಟ್ಟುಗಳಲ್ಲಿ ಸ್ವೀಕರಿಸುತ್ತಿಲ್ಲ. 

ಬ್ಯಾಂಕುಗಳಲ್ಲಿಯೂ ಸಹ ಈ 10 ರೂ.ಗಳ ನೋಟುಗಳು ಲಭ್ಯವಿಲ್ಲದಾಗಿದೆ. ಕಳೆದ ದೀಪಾವಳಿ ಸಂದರ್ಭದಲ್ಲಿಯೇ ಲಕ್ಷ್ಮಿ ಪೂಜೆಗೂ ಸಹ ಯಾವ ಬ್ಯಾಂಕುಗಳೂ 10-20ರ ಹೊಸ ನೋಟುಗಳನ್ನು ನೀಡಲಿಲ್ಲ. ಬದಲಾಗಿ 50, 100, 200 ಮತ್ತು 500ರ ಹೊಸ ನೋಟುಗಳನ್ನು ಮಾತ್ರ ಅತ್ಯಂತ ಆಪ್ತ, ಆಯ್ದ ಗ್ರಾಹಕರಿಗೆ ನೀಡಿದವು. 

ಹಾಗಾಗಿ ಎಲ್ಲೆಡೆ ಈ  ನೋಟಿನ ಅಭಾವ ತಲೆ ದೋರಿದ್ದು, ಹೋಟೆಲ್, ಅಂಗಡಿಗಳ ಚಿಲ್ಲರೆ ಮಾರಾಟಗಾರರು ಪರದಾಡುವಂತಾ ಗಿದೆ. ಈ ಸಂಬಂಧ ಗ್ರಾಹಕರು ಮತ್ತು ಅಂಗಡಿಗಳವರ ಮಧ್ಯೆ ಮಾತಿನ ಚಕಮಕಿಗಳು ನಡೆಯುತ್ತಿವೆ. ಚಿಲ್ಲರೆ ಇರಲಿ, ಹತ್ತು ರೂ.ಗಳು ಇಲ್ಲ ಎಂಬ ಕಾರಣಕ್ಕೆ ಅಂಗಡಿಯವರು ಕೊಡುವ ಬಿಸ್ಕತ್, ಚಾಕೋಲೆಟ್ ಇತ್ಯಾದಿ ವಸ್ತುಗಳನ್ನು ಅನಿವಾರ್ಯವಾಗಿ ಕೊಂಡುಕೊಳ್ಳುವ ಕರ್ಮ ಗ್ರಾಹಕರದ್ದಾಗಿದೆ.

ಸಮಾಧಾನದ ಸಂಗತಿ ಎಂದರೆ ಗೂಗಲ್ ಪೇ,  ಪೋನ್ ಪೇ  ಸೌಲಭ್ಯವಿರುವವರು ಹಣ ವರ್ಗಾವಣೆ ಮಾಡುವುದರಿಂದಾಗಿ ಚಿಲ್ಲರೆ ಸಮಸ್ಯೆ ತುಸು ಕಡಿಮೆ ಎನಿಸಿದರೂ, ಸಂಪೂರ್ಣ ಸಮಸ್ಯೆ ನೀಗಿಸಲು ಸಾಧ್ಯವಿಲ್ಲವಾಗಿದೆ. ಈ ಸೌಲಭ್ಯ ಹೆಚ್ಚಿನ ಜನರು ಪಡೆಯಲಿ ಎಂಬ ಕಾರಣಕ್ಕೆ ಸಣ್ಣ ಮುಖಬೆಲೆ ನೋಟುಗಳನ್ನು ಮುದ್ರಿಸುತ್ತಿಲ್ಲ ಎನ್ನುವ ದೂರೂ ಕೇಳಿ ಬರುತ್ತಿದೆ.

ಯಾವುದೋ ಗಾಳಿ ಸುದ್ದಿಗೆ ಒಳಗಾಗಿ 5ರೂ. ಮುಖಬೆಲೆಯ ನೋಟುಗಳನ್ನು ಯಾರೂ ಸ್ವೀಕರಿಸುತ್ತಿಲ್ಲ. ಆ ಜಾಗದಲ್ಲಿ ನಾಣ್ಯ ಗಳು  ಹರಿದಾಡುತ್ತಿವೆ. ಆದರೆ 10 ರೂ. ನಾಣ್ಯ ಗಳು ಇದ್ದೂ ಇಲ್ಲದಂತಾಗಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ಅನೇಕ ಕಡೆ ಈ ಹತ್ತರ ನಾಣ್ಯಗಳು ಚಲಾವಣೆಯಲ್ಲಿ  ಇವೆ. ಆದರೆ ದಾವಣಗೆರೆ ಜಿಲ್ಲೆ ಸೇರಿದಂತೆ ಅನೇಕ ನಗರಗಳಲ್ಲಿ ಆ ಪರಿಸ್ಥಿತಿ ಇಲ್ಲವಾಗಿದೆ. ಹಾಗಾಗಿ ಬ್ಯಾಂಕುಗಳಲ್ಲಿ ಮಾತ್ರ ಸ್ವೀಕಾರವಾಗುವ ನಾಣ್ಯಗಳನ್ನು ಗ್ರಾಹಕ ಪಡೆಯುತ್ತಿಲ್ಲ. ಕಾರಣ ಹೊರಗಡೆ ಎಲ್ಲೂ ಚಲಾವಣೆ ಆಗದ ನಾಣ್ಯವನ್ನು  ಗ್ರಾಹಕ ತೆಗೆದು ಕೊಂಡು ಏನು ಮಾಡುತ್ತಾನೆ. ಹಾಗಾಗಿ ಕೋಟ್ಯಾಂತರ ಮೊತ್ತದ 10ರ ನಾಣ್ಯಗಳು ಬ್ಯಾಂಕುಗಳಲ್ಲಿಯೇ ಕೊಳೆಯು ವಂತಾಗಿಬಿಟ್ಟಿದೆ.

10 ರೂ.ನ ನಾಣ್ಯಗಳನ್ನು  ಚಲಾವಣೆ ಯಿಂದ ವಾಪಾಸ್ಸು ಪಡೆದಿರುವುದಿಲ್ಲ ಎಂದು ಹಲವಾರು ಬಾರಿ ರಿಜರ್ವ್ ಬ್ಯಾಂಕ್  ತಿಳಿಸಿದೆ.    ಅಲ್ಲದೇ ಬ್ಯಾಂಕುಗಳು  ಈ ನಾಣ್ಯಗಳನ್ನು ತಿರಸ್ಕರಿಸುವಂತಿಲ್ಲ ಎಂಬ ಸೂಚನೆ ನೀಡಿದೆ. ಆದರೂ  ಚಲಾವಣೆ ಆಗುತ್ತಿಲ್ಲ.

ಅಷ್ಟಕ್ಕೂ ಎಲ್ಲಾ ಗ್ರಾಹಕರೂ ಸಹ ತಮ್ಮ ಬಳಿ ಇದ್ದಬದ್ದ ಎಲ್ಲಾ ಹತ್ತರ ನಾಣ್ಯಗಳನ್ನು ಈಗಾಗಲೇ ಬ್ಯಾಂಕುಗಳಿಗೆ ಜಮಾ ಮಾಡಿ ಬಿಟ್ಟಿದ್ದಾರೆ. ಬ್ಯಾಂಕುಗಳಿಗೆ ಈಗ ಒಳ ಹರಿವಿದೆ ಆದರೆ ಅದನ್ನು ಹೊರ ಹರಿವು ಮಾಡಿ ಚಲಾವಣೆಗೆ ಮುಂದಾದರೆ, ಈಗಿರುವ 10-20 ರೂ.ಗಳ ನೋಟಿನ ಸಮಸ್ಯೆ ಬಗೆ ಹರಿಸಬಹುಗಾಗಿದೆ  ಎಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿದೆ.

10 ರೂ.ಗಳ ನಾಣ್ಯವನ್ನು, ಮತ್ತೆ ಇಲ್ಲಿ ಚಲಾವಣೆಗೆ ತರಬೇಕು. ನಾಣ್ಯವನ್ನು ಸ್ವೀಕರಿಸದ ಅಂಗಡಿ-ಮುಂಗಟ್ಟುಗಳ ಮೇಲೆ ಕೇಸು ದಾಖಲು ಮಾಡಬೇಕು. ಹೀಗೆ ನಾಲ್ಕೈದು ಕೇಸುಗಳು ದಾಖಲಾದರೆ ನಾಣ್ಯದ ಚಲಾವಣೆ ಸುಸೂತ್ರ ವಾಗುತ್ತದೆ.  ನೋಟುಗಳ ಸಮಸ್ಯೆಯೂ ನೀಗುತ್ತದೆ ಎಂಬ ಸಲಹೆಯನ್ನು ಹಿರಿಯ ನಾಗರಿಕ ಬಿಎಸ್ಸೆನ್ನೆಲ್  ಬಸವರಾಜಪ್ಪ, ಬೇಕರಿ ಗಣೇಶ್ ಮತ್ತು ಸಿದ್ದಣ್ಣ ಅವರು ನೀಡುತ್ತಾರೆ. ಇದು ಒಂದು ರೀತಿಯ ಉತ್ತಮ ಸಲಹೆಯೂ ಆಗಿದೆ ಎನ್ನಬಹುದಲ್ಲವೇ.?.

`ಬೆಕ್ಕಿಗೆ ಗಂಟೆ ಕಟ್ಟುವವರು ಯಾರು..?’


– ಉತ್ತಂಗಿ ಕೊಟ್ರೇಶ್‌

error: Content is protected !!