ಹರಪನಹಳ್ಳಿ, ಜ.8- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಲು ನ್ಯಾಯಮೂರ್ತಿ ಕಾಂತರಾಜ್ ಆಯೋಗದ ವರದಿ ಯಥಾವತ್ ಅನುಷ್ಟಾನಕ್ಕೆ ಆಗ್ರಹಿಸಿ, ಚಿತ್ರದುರ್ಗ ನಗರದ ಹೊರವಲಯದಲ್ಲಿ ಇದೇ ದಿನಾಂಕ 28ರಂದು ಶೋಷಿತರ ಬೃಹತ್ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು, ಶೋಷಿತ ಸಮುದಾಯಗಳ ಐತಿಹಾಸಿಕ ಜಾಗೃತಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿಂದುಳಿದ ಹಾಗೂ ತಳಸಮುದಾಯಗಳ ಸಚಿವರನ್ನು ಮತ್ತು ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಅಹಿಂದ ವರ್ಗದ ನೇತಾರರನ್ನು ಸಮಾವೇಶಕ್ಕೆ ಆಮಂತ್ರಿಸಲು ಉದ್ದೇಶಿಸಲಾಗಿದೆ. ಶೋಷಿತರ ಈ ಬೃಹತ್ ಐತಿಹಾಸಿಕ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 10 ಲಕ್ಷ ಜನ ಸಮಾಗಮ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಕಾಂತರಾಜ್ ಆಯೋಗವನ್ನು ರಚಿಸುವ ಮೂಲಕ ಜಾತಿ ಗಣತಿಗೆ ನಾಂದಿ ಹಾಡಿದರು. ಈ ನಾಡಿನ ಜನರ ತೆರಿಗೆ ಹಣದ 158 ಕೋಟಿ ರೂ. ವೆಚ್ಚ ಮಾಡುವ ಜತೆಗೆ, ಗಣತಿ ಕಾರ್ಯಕ್ಕಾಗಿ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಅಮೂಲ್ಯ ಮಾನವ ದಿನಗಳನ್ನು ವಿನಿಯೋಗಿಸಲಾಯಿತು.
ಗಣತಿ ಸಂದರ್ಭದಲ್ಲಿ ಬದಲಾದ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ, ವಿವಿಧ ಪಕ್ಷಗಳ ನಾಯಕರು, ಗಣತಿ ಕಾರ್ಯಕ್ಕೆ ತಮ್ಮ ಕೌಟುಂಬಿಕ ಹೇಳಿಕೆಯನ್ನು ದಾಖಲಿಸಿದ್ದಾರೆ. ಆದರೆ, ಈಗ ಜಾತಿಗಣತಿ ಅವೈಜ್ಞಾನಿಕವಾಗಿದೆ ಎಂದು ಹೇಳಿಕೆ ನೀಡುವುದು ಸಾಧುವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಬಲಾಢ್ಯ ಸಮುದಾಯಗಳು ಮೀಸಲಾತಿ ಕೋರದಿದ್ದರೂ, ಅವರ ಮೇಲೆ ಮಮಕಾರ ತೋರುವ ಮೂಲಕ ಕೇಂದ್ರ ಸರ್ಕಾರ ಶೇ. 10ರಷ್ಟು ಮೀಸಲಾತಿ ಒದಗಿಸಿದೆ. ಜತೆಗೆ, ಅವೈಜ್ಞಾನಿಕವಾದ ನಿಯಮಗಳನ್ನು ಅಳವಡಿಸುವ ಮೂಲಕ ಮಹಿಳಾ ಮೀಸಲಾತಿಯನ್ನು ಘೋಷಿಸುವ ಮೂಲಕ ಮಹಿಳಾ ಸಂಕುಲಕ್ಕೆ ಅಪಚಾರ ಎಸಗಿದೆ. ಹೀಗಾಗಿ ಈಗ ಅಳವಡಿಸಿರುವ ನಿಯಮಗಳನ್ನು ಸಡಿಲಿಸುವ ಮೂಲಕ ತತ್ಕ್ಷಣವೇ ಮಹಿಳಾ ಮೀಸಲಾತಿ ಅನುಷ್ಠಾನಗೊಳಿಸಬೇಕು. ಜತೆಗೆ, ಲೋಕಸಭೆ ಹಾಗೂ ವಿಧಾನಸಭೆ ಸದಸ್ಯತ್ವಕ್ಕೂ ಒಳಮೀಸಲಾತಿ ಕಲ್ಪಿಸಬೇಕು. ಅದರ ಜತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ, ಇತರೆ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಶೋಷಿತ ಸಮುದಾಯಗಳಿಗೆ ಸಂಸತ್, ರಾಜ್ಯ ವಿಧಾನಮಂಡಲದ ಸದಸ್ಯತ್ವ ಮೀಸಲಾತಿ ಘೋಷಿಸಬೇಕು ಎಂದರು.
ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಸಿ. ಜಾಹೀದ್, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಮುಖಂಡರಾದ ಹಲಗೇರಿ ಮಂಜುನಾಥ, ಶಂಕರನಹಳ್ಳಿ ಹನುಮಂತಪ್ಪ, ಡಿಶ್ ವೆಂಕಟೇಶ್, ಗುಡಿ ನಾಗರಾಜ್, ಶಿವಾಜಿನಾಯ್ಕ, ಡಿ. ಮೋತಿನಾಯ್ಕ. ಓ. ಮಹಾಂತೇಶ, ದೇವರತಿಮ್ಲಾಪುರ ಈಶ, ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಗೋಣಿಬಸಪ್ಪ, ಕೊರಚ, ಕೊರಮ ಸಮಾಜದ ತಾಲ್ಲೂಕು ಅಧ್ಯಕ್ಷ ಅಶೋಕ, ಈಡಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಇ. ವೆಂಕಟೇಶ್, ಛಲವಾದಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಪ್ರತಾಪ್, ಮುಖಂಡರಾದ ಕೆ.ಎಂ.ಮಂಜುನಾಥ್, ಮಾರೆಪ್ಪ, ಲಿಯಾಖತ್ ಅಲಿ, ಮೈದೂರು ರಾಮಣ್ಣ, ಹುಲಿಕಟ್ಟಿ ಚಂದ್ರಪ್ಪ, ಎಚ್. ವಸಂತಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.