ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರತ್ಯೇಕ ವಿಚಾರಣೆಗೆ ನ್ಯಾಯಾಲಯ ಸ್ಥಾಪನೆ

ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರತ್ಯೇಕ ವಿಚಾರಣೆಗೆ ನ್ಯಾಯಾಲಯ ಸ್ಥಾಪನೆ

ಜಿಲ್ಲಾ ಜಾಗೃತಿ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್

ದಾವಣಗೆರೆ, ಡಿ. 28- ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರತ್ಯೇಕ ವಿಚಾರಣೆಗಾಗಿ ನ್ಯಾಯಾಲಯವನ್ನು ಸ್ಥಾಪನೆ ಮಾಡಬೇಕೆಂದು ಒತ್ತಾಯ ಬಂದಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ಜರುಗಿದ ನಾಲ್ಕನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟರ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಎಲ್ಲಾ ಮುಂಜಾಗ್ರತಾ ಕ್ರಮದ ಜೊತೆಗೆ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ಅಂತ್ಯಕ್ಕೆ 36 ಎಫ್‍ಐಆರ್ ದಾಖಲಾಗಿದ್ದು ಡಿಸೆಂಬರ್‌ವರೆಗೆ ಒಟ್ಟು 48 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿರುತ್ತದೆ. ಆದರೆ ಎಫ್‍ಐಆರ್ ದಾಖಲಾದ ತಾಲ್ಲೂಕುಗಳಲ್ಲಿ ಹೆಚ್ಚಿನದಾಗಿ ದಾವಣಗೆರೆ 19 ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ 10 ಪ್ರಕರಣಗಳಿವೆ.
ದಾಖಲಾದ ಪ್ರಕರಣಗಳಲ್ಲಿ 27 ಪ್ರಕರಣ ಗಳಿಗೆ ಈಗಾಗಲೇ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. 12 ಪ್ರಕರಣಗಳಲ್ಲಿ ತನಿಖೆ ಹಂತದಲ್ಲಿದ್ದು, 8 ಬಿ.ರಿಪೋರ್ಟ್ ಹಾಕಿದ್ದು 1 ಪ್ರಕರಣವನ್ನು ಇತರೆ ಕಾರಣದಿಂದ ವಿಲೇ ಮಾಡಲಾಗಿ 21 ಬಾಕಿ ಉಳಿದಿರುತ್ತವೆ. ಸೆಪ್ಟೆಂಬರ್‌ವರೆಗೆ ಬಾಕಿ ಇದ್ದ 15 ಮತ್ತು ಅಕ್ಟೋಬರ್‍ನಿಂದ ಡಿಸೆಂಬರ್ ವರೆಗೆ 12 ಪ್ರಕರಣಗಳು ಸೇರಿ 27 ಪ್ರಕರಣಗಳಲ್ಲಿ ಎಫ್‍ಐಆರ್ ಮತ್ತು ಚಾರ್ಜ್‍ಶೀಟ್ ಹಂತದಲ್ಲಿ ಒಟ್ಟು 64 ಸಂತ್ರಸ್ಥರಿಗೆ 53 ಲಕ್ಷ ಪರಿಹಾರವನ್ನು ನೀಡಲಾಗಿದ್ದು, 4 ಪ್ರಕರಣಗಳಲ್ಲಿ ಮಾತ್ರ ಪರಿಹಾರ ನೀಡುವುದು ಬಾಕಿ ಇರುತ್ತದೆ ಎಂದು ಅವರು ವಿವರಿಸಿದರು.
2018-19 ರಿಂದ 2023 ರ ಡಿಸೆಂಬರ್ 26 ರ ವರೆಗೆ ದೌರ್ಜನ್ಯ ತಡೆ ಕಾಯ್ದೆಯಡಿ ಮರಣ ಹೊಂದಿದ 7 ಜನರ ಕುಟುಂಬದ ವಾರಸುದಾರರಿಗೆ ಮಾಸಿಕ ಐದು ಸಾವಿರ ಮತ್ತು ಭತ್ಯೆ ಸೇರಿ ಪಿಂಚಣಿ ಮತ್ತು ಇವರ ಕುಟುಂಬದವರಿಗೆ ಈಗಾಗಲೇ 5 ಜನರಿಗೆ ಸರ್ಕಾರಿ ನೌಕರಿಯನ್ನು ನೀಡಲಾಗಿದ್ದು, ಇಬ್ಬರಿಗೆ ಸರ್ಕಾರಿ ನೌಕರಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದಲ್ಲದೇ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಇದರಲ್ಲಿ ಡಿಸೆಂಬರ್ ತಿಂಗಳಲ್ಲಿ 4 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದ್ದು, 142 ಪ್ರಕರಣಗಳ ಇತ್ಯರ್ಥಕ್ಕೆ ಬಾಕಿ ಇರುತ್ತವೆ. ಸಮಿತಿ ಸದಸ್ಯರ ಮನವಿ ಮೇರೆಗೆ ಕಳೆದ ಸಭೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಪ್ರಕರಣಗಳ ಪ್ರತ್ಯೇಕ ವಿಚಾರಣೆಗಾಗಿ ನ್ಯಾಯಾಲಯವನ್ನು ಸ್ಥಾಪನೆ ಮಾಡ ಬೇಕೆಂದು ಒತ್ತಾಯ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾದ ಸಂತೋಷ್ ಎಂ.ವಿಜಯಕುಮಾರ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ನಾಗರಾಜ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್ ಹಾಗೂ ಜಾಗೃತಿ ಸಮಿತಿ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!