ದಾವಣಗೆರೆ, ಡಿ. 10 – ಕರ್ನಾಟಕದಲ್ಲಿ ಈಗ ಮೂರು ಲಕ್ಷದಷ್ಟು ಜೈನರಿದ್ದೇವೆ. ಆದರೆ, ಅರಿವು ಮೂಡಿಸಿದರೆ ಜೈನ ಧರ್ಮದ ತತ್ವ ಪಾಲಿಸುವವರ ಸಂಖ್ಯೆ 25 ಲಕ್ಷಕ್ಕೆ ತಲುಪುತ್ತದೆ ಎಂದು ಹೊಂಬುಜದ ಜಗದ್ಗುರು ಶ್ರೀ ದೇವೇಂ ದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನಮಂದಿರದ ದಶಮಾನೋತ್ಸವ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಎರಡನೇ ದಿನದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಈ ಹಿಂದೆ ಕರ್ನಾಟಕ ಸೇರಿದಂತೆ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೈನರಿದ್ದರು. ಕಾಲಾಂತರದಲ್ಲಿ ಬೇರೆ ಧರ್ಮದ ಪ್ರಭಾವಕ್ಕೆ ಸಿಲುಕಿ ಜೈನ ಧರ್ಮದ ಗುರುತು ಹಾಗೂ ಹೆಸರು ಹೇಳುತ್ತಿಲ್ಲ ಎಂದವರು ತಿಳಿಸಿದರು.
ಧರ್ಮಾಂತರಗೊಂಡರೂ ಸಹ ಜೈನ ತತ್ವಗಳ ಪಾಲನೆ ಮುಂದುವರೆಸಿದ್ದಾರೆ. ಈ ಬಗ್ಗೆ ಅರಿವು ಮೂಡಿ ಸಿದರೆ ಧಾರ್ಮಿಕವಾಗಿ ಜೈನರ ಸಂಖ್ಯೆ 25 ಲಕ್ಷಕ್ಕೆ ತಲುಪುತ್ತದೆ ಎಂದು ಶ್ರೀಗಳು ಹೇಳಿದರು.
ಆದರೆ, ಧಾರ್ಮಿಕ ಕಾರಣದಿಂದ ಅನು ಕೂಲ ಕಲ್ಪಿಸಲು ಹೋದರೆ ಸಾಮಾಜಿಕವಾಗಿ ಅನಾನುಕೂಲವೂ ಆಗಬಹುದು. ಜೈನರೆಂದು ಗುರುತಿಸಿಕೊಂಡರೆ ಸರ್ಕಾರದಿಂದ ಸೌಲಭ್ಯ ಗಳು ಸಿಗುವುದಿಲ್ಲ. ಸೌಲಭ್ಯಗಳ ಪ್ರಮಾಣ ಪತ್ರಕ್ಕಾಗಿ ಕೆಲವರು 2ಎ ಇಲ್ಲವೇ 3ಬಿ ಮುಂತಾದ ಪ್ರವರ್ಗಗಳಲ್ಲಿದ್ದಾರೆ. ಜೈನ ಎಂದು ಹೇಳಿದರೆ ಶಿಕ್ಷಣ ಹಾಗೂ ಉದ್ಯೋಗ ಸಿಗುವು ದಿಲ್ಲ ಎಂಬ ಅನಾನುಕೂಲತೆ ಇದೆ ಎಂದವರು ತಿಳಿಸಿದರು.
ಆದರೂ, ಅವರು ಎಲ್ಲೇ ಇದ್ದರೂ ಅಹಿಂಸಾ ಧರ್ಮ ಪಾಲಿಸುತ್ತಿರುವುದೇ ಸಂತೋಷಕರ. ಜಬರ್‌ದಸ್ತ್ ಮೂಲಕ ಧರ್ಮ ಬದಲಿಸಲು ಸಾಧ್ಯ ವಿಲ್ಲ. ಜೈನ ಧರ್ಮದ ತತ್ವ ಪಾಲಿಸಲು ಜಾಗೃತಿ ಮೂಡಿಸಬೇಕಿದೆ ಎಂದು ಶ್ರೀಗಳು ಹೇಳಿದರು.
ಕರ್ನಾಟಕ ಹಾಗೂ ದೇಶದಲ್ಲಿ ಜೈನರ ಸಂಖ್ಯೆ ಒಂದು ಕಾಲದಲ್ಲಿ ದೊಡ್ಡ ಮಟ್ಟದಲ್ಲಿತ್ತು. ದಾವಣ ಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಇಲ್ಲಿ ಜೈನರಿದ್ದರು. ಜೈನ ಶ್ರಾವಕರು ನಂತರ ಸಾದರಾಗಿ ಬದಲಾಗಿದ್ದಾರೆ. ಕೇರಳ, ಮೈಸೂರು ಗಡಿಯಲ್ಲಿ ನಾಮಧಾರಿ ಗೌಡರು, ಮಲೆನಾಡಿ ನಲ್ಲಿ ಒಕ್ಕಲಿಗರು ಇವರೆಲ್ಲರೂ ಮೊದಲು ಜೈನರಾಗಿದ್ದರು. ಮೊಘಲರ ಕಾಲದಲ್ಲಿ ಸ್ಥಾನಾಂತರಗೊಂಡು ಕರ್ನಾಟಕಕ್ಕೆ ಬಂದ ದೇಶಪಾಂಡೆ, ದೇಸಾಯಿ, ಪಾಟೀಲ ಮುಂತಾದವರೂ ಜೈನರಾಗಿದ್ದರು ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.
ಪಶ್ಚಿಮ ಬಂಗಾಳ ಕಾಡು ಪ್ರದೇಶದಲ್ಲಿನ ಸರಾಗ್ ಎಂಬ ಆದಿವಾಸಿಗಳು ಅಹಿಂಸಾವಾದಿಗಳು. ಕಾಡಿನಲ್ಲಿದ್ದರೂ ಅಹಿಂಸೆ ಪಾಲಿಸುತ್ತಿದ್ದಾರೆ. ಅವರೆ ಲ್ಲರೂ ಮೂಲತಃ ಜೈನರು ಎಂದು ಹೇಳಿದರು.
ಸಮಾರಂಭದ ವೇದಿಕೆ ಮೇಲೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ, ಮಹಾವೀರ ಸಂಘದ ಗೌರವಾಧ್ಯಕ್ಷ ಎಂ.ಎ. ಸುದರ್ಶನ ಕುಮಾರ್ ಉಪಸ್ಥಿತರಿದ್ದರು.
ದಾವಣಗೆರೆ ಮಹಾವೀರ ಸಂಘದ ಅಧ್ಯಕ್ಷ ಬಿ.ಎಸ್.ಅಜಿತ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಹಾವೀರ ಸಂಘದ ಕಾರ್ಯದರ್ಶಿ ಡಿ. ಸುನೀಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಯುವ ಮಂಚ್ ಉಪಾಧ್ಯಕ್ಷ ಕೋಮಲ್ ಕುಂದಪ್ಪ ಸ್ವಾಗತಿಸಿದರು. ಕುಮುದ ನಾಗಭೂಷಣ್ ನಿರೂಪಿಸಿದರು. ಮಹಾವೀರ ಯುವ ಮಂಚ್ ಸಂಘಟನಾ ಕಾರ್ಯದರ್ಶಿ ಧರಣೇಂದ್ರ ಪ್ರಸಾದ್ ವಂದಿಸಿದರು.