ದಾವಣಗೆರೆ ಖಾಸಗಿ ಬಸ್ ನಿಲ್ದಾಣ ಹೆಸರಿನ ‘ವಸತಿ ಗೃಹ’

ದಾವಣಗೆರೆ ಖಾಸಗಿ ಬಸ್ ನಿಲ್ದಾಣ ಹೆಸರಿನ ‘ವಸತಿ ಗೃಹ’

ಮಾನ್ಯರೇ, 

ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಮಾಡಲಾಗುವುದೆಂಬ ಘೋಷಣೆ ಯಾದಾಗಿನಿಂದ ನಗರದಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಅನೇಕ ಕರಾಮತ್ತುಗಳೇ ನಡೆದಿವೆ. ಅದನ್ನು ಪುಸ್ತಕ ರೂಪದಲ್ಲೂ ಬರೆಯಬಹುದು. ಹೋಗಲಿ ಬಿಡಿ; ಮೊದಲು ಕಾಂಕ್ರೀಟ್ ರಸ್ತೆ ಮಾಡುವುದು, ನಂತರ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯುವುದು ಮತ್ತೆ ರಸ್ತೆ ರಿಪೇರಿ ಮಾಡುವುದು. ಅಷ್ಟೇನಾ ಎನ್ನಬೇಡಿ, ಜಲಸಿರಿ ಯೋಜನೆ ಜಾರಿಮಾಡಿ ಇಪ್ಪತ್ತನಾಲ್ಕು ಗಂಟೆ ನೀರು ಹರಿಸುತ್ತೇವೆಂದು ಮತ್ತೆ ರಸ್ತೆ ಬಗಿಯುವುದು ಇದನ್ನು ದಾವಣಗೆರೆಯ ಜನ ಕಳೆದ ಏಳೆಂಟು ವರ್ಷಗಳಿಂದ ನೋಡುತ್ತಲೇ ಬಂದಿದ್ದಾರೆ. ಜನರೂ ಕೂಡ ಎಷ್ಟು ಸಿನಿಕರೆಂದರೆ  ನಮ್ಮದೇನು ಹೋಗುತ್ತೆ ಸರ್ಕಾರದ ದುಡ್ಡು ಮುಖ ತಿರುಗಿಸುವುದೂ ಉಂಟು.

ಹೀಗೆ ಕೆಡವಿ-ಕಟ್ಟಿ, ರಸ್ತೆ ಬಗೆದು ಮತ್ತೆ ಮುಚ್ಚಿ ಮತ್ತೆ ಬಗೆದಿರುವುದಕ್ಕೆ ಲೆಕ್ಕ ಉಂಟೆ? ಸಾಧ್ಯವೇ ಇಲ್ಲ. ಹೀಗೆಯೇ ಸ್ಮಾರ್ಟ್ ಸಿಟಿ ಮಾಡಬಹುದೆಂಬ ಅವರ ಲೆಕ್ಕಾಚಾರಗಳನ್ನು ಜಾರಿಗೆ ತರಲು ಅಧಿಕಾರಿ ವರ್ಗದವರಲ್ಲೇ ಪೈಪೋಟಿ ಶುರುವಾಗಿ ವರ್ಗವಾಗಿ ಹೋಗಿ ಬಂದವರಿಗೂ ಕೊರತೆ ಇಲ್ಲ. ಅಷ್ಟರಮಟ್ಟಿಗೆ ಅಧಿಕಾರಿಗಳಲ್ಲಿ ದಾವಣಗೆರೆಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಪೈಪೋಟಿಯೇ ನಡೆದಿದೆ! ಈ ಕಾರಣದಿಂದ ಈ ನಗರ ಎಷ್ಟು ಸ್ಮಾರ್ಟ್ ಆಗಿದಯೋ ಗೊತ್ತಿಲ್ಲ, ಆದರೆ ಈ ಸಂಸ್ಥೆಗೆ ಬಂದು ಹೋಗುತ್ತಿರುವ ಅಧಿಕಾರಿಗಳ ಸಂಪತ್ತು ಸ್ಮಾರ್ಟ್ ಆಗಿರಲಿಕ್ಕೆ ಸಾಕು.

ಇವರ ಸಾಮಾನ್ಯ ಜ್ಞಾನವೂ ಅಂತಿತಹದ್ದಲ್ಲ. ಇವರ ಕಿರೀಟಕ್ಕೆ ಮತ್ತೊಂದು ಗರಿ ಎನ್ನುವಂತೆ `ಖಾಸಗಿ ಬಸ್ ನಿಲ್ದಾಣ’ ಮರುನಿರ್ಮಿತವಾಗಿ ಎದ್ದು ನಿಂತಿದೆ! ಮೊದಲಿದ್ದ ಹಳೇ ನಿಲ್ದಾಣದಲ್ಲಿ ಹಾಗೋ ಹೀಗೋ ಖಾಸಗಿ ಬಸ್‌ಗಳು ಪೈಪೋಟಿಯಿದ್ದರೂ ತಮ್ಮ ತಮ್ಮ ಬಸ್‌ಗಳನ್ನು ನಿಲ್ದಾಣದಲ್ಲಿ ಜಾಗಗಳನ್ನು ಹುಡುಕಿ ಕೊಳ್ಳುತ್ತಿದ್ದರು. ಆದರೀಗ ಬಸ್ ನಿಲ್ದಾಣದ ಹೆಸರಿನಲ್ಲಿ ಹೊಸ ಕಟ್ಟಡವೇನೋ ಎದ್ದು ನಿಂತಿದೆ ಆದರೆ ಅಲ್ಲಿ ಬಸ್‌ಗಳಿಗೇ ಜಾಗ ಸಿಗಬಾರದೇ? ಹತ್ತಿರತ್ತಿರ ಹತ್ತು ಲಕ್ಷ ಜನ ಸಂಖ್ಯೆ ಮೀರುತ್ತಿರುವ, ಶರವೇಗದಲ್ಲಿ ಮತ್ತಷ್ಟು ವೇಗದಲ್ಲಿ ಬೆಳೆಯುತ್ತಿರುವ ಈ ನಗರಕ್ಕೆ ಕನಿಷ್ಟ ಹತ್ತು ಬಸ್ ಗಳು ನಿಲ್ಲಲೂ ಸಾಮರ್ಥ್ಯವಿಲ್ಲದ, ಅದೂ ಪ್ರಮುಖ ಬಸ್ ನಿಲ್ದಾಣದ ಈ ಮಾದರಿಯನ್ನು ತಯಾರಿಸಿದವರಿಗೂ ಇದಕ್ಕೆ ಒಪ್ಪಿಗೆ ಕೊಟ್ಟವರಿಗ ಎಂತಹ ಪ್ರಶಸ್ತಿ ಕೊಟ್ಟರೂ ಕಡಿಮೆಯೇ. ಥೇಟ್ ತ್ರೀ ಸ್ಟಾರ್ ವಸತಿ ಗೃಹದಂತಿರುವ ಈ ಕಟ್ಟಡ ಮತ್ತು ಅದರ ಮುಂದಿರುವ ಖಾಲಿ ಜಾಗ ವಸತಿ ಗೃಹಕ್ಕೆ ಬರುವವರ ವಾಹನಗಳಿಗೆ ಹೇಳಿ ಮಾಡಿಸಿದಂತ ಪಾರ್ಕಿಂಗ್ ಇರುವಂತಿದೆ. ಇಂತಹ ಮಾದರಿ ಕಟ್ಟಡ ಕಟ್ಟಲು ಅದ್ಯಾವ ಜನ ಪ್ರತಿನಿಧಿಗಳಿಗೆ ಕನಸು ಬಿದ್ದಿತ್ತೋ ಆ ದೇವರಿಗೇ ಗೊತ್ತು.

ಬಸ್‌ಗಳೇ ನಿಲ್ಲಲು ಸಾಕಷ್ಟು ಸ್ಥಳವಿಲ್ಲದ ಇದನ್ನು ಬಸ್ ನಿಲ್ದಾಣವೆಂದು ಕರೆಯಲು ಯಾರೂ ತಯಾರಿಲ್ಲ. ಇದೇ ಕಾರಣಕ್ಕೆ ಏನೋ ಇದು ತಯಾರಾಗಿ ಆರು ತಿಂಗಳಾ ದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ! ಉದ್ಘಟಿಸಲು ಯಾರಿಗಾದರೂ ಮುಜುಗರ ವಾಗಲಿಕ್ಕೂ ಸಾಕು.

ಒಂದಲ್ಲಾ ಒಂದು ದಿನ ಉದ್ಘಾಟನೆಗೊಂಡು ಬಲು ಖುಷಿಯಿಂದ ಪ್ರಯಾಣಿಕರು ಪರದಾಡಿ ಬಸ್ ಹತ್ತಿ ಸಂತೋಷ ಪಡದಿದ್ದರೆ ಹೋಗಲಿ. ಆ ಕಟ್ಟಡದಲ್ಲಿ ನಿರ್ಮಿಸಿರುವ `ಎಸ್ಕೆಲೇಟರ್’ನ್ನು ಹತ್ತಿ, ಇಳಿದು ಸಂತೋಷ ಪಡುವುದಂತೂ ಗ್ಯಾರಂಟಿ. ಊರು ತಲುಪಿದ ಮೇಲೆ ಬಂಧು ಗಳಿಗೆ ಈ ಎಸ್ಕೆಲೇಟರ್ ನ ಮಹಿಮೆಯನ್ನು ಕೊಂಡಾಡುವುದಂತೂ ಸತ್ಯ. ಅಷ್ಟರಮಟ್ಟಿಗೆ ಜನರಿಗೆ ಇದರ ಉಪಯೋಗ ಖಂಡಿತ. 


  ಇಮ್ತಿಯಾಜ್‌ ಹುಸೇನ್, ದಾವಣಗೆರೆ.

error: Content is protected !!