ಸಿರಿಧಾನ್ಯಗಳ ಬಗ್ಗೆ ಗ್ರಾಮೀಣ ಮಹಿಳೆಯರ ತರಬೇತಿ ಕಾರ್ಯಕ್ರಮದಲ್ಲಿ ರಾಜಸ್ಥಾನದ ಡಾ.ರಂಜಿತ್
ದಾವಣಗೆರೆ, ಡಿ.4- ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಜಸ್ಥಾನದ ಜೈಪುರದ ಚೌಧರಿ ಚರಣ್ ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯಗಳ ಮೌಲ್ಯ ವರ್ಧನೆ, ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಯ ಬಗ್ಗೆ ಮೂರು ದಿನಗಳ ಎರಡು ತರಬೇತಿಯನ್ನು ಗ್ರಾಮೀಣ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಚೌಧರಿ ಚರಣ್ ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯ ಸಂಶೋಧನಾ ಅಧಿಕಾರಿ ಡಾ.ರಂಜಿತ್ ಮಾತನಾಡಿ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೌಲ್ಯವರ್ಧನೆ ತೀರಾ ಕಡಿಮೆಯಾಗಿದ್ದು, ಇದರಿಂದ ರೈತರು ಆರ್ಥಿಕ ಲಾಭ ಪಡೆಯಲು ವಿಫಲರಾಗಿದ್ದಾರೆ ಎಂದು ತಿಳಿಸಿದರು.
ಜೈಪುರದ ಸಂಸ್ಥೆಯು ಕೃಷಿ ಬೆಳೆಗಳ ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ರೈತರಿಗೆ ಸ್ಪಂದಿಸುವ ರಾಷ್ಟ್ರದ ಏಕೈಕ ಸಂಸ್ಥೆಯಾಗಿದ್ದು, ತರಳಬಾಳು ಕೆ.ವಿ.ಕೆಯು ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ತರಬೇತಿ ಹಮ್ಮಿಕೊಂಡಿದ್ದು ಅತ್ಯಂತ ಶ್ಲಾಘನೀಯ. ಸಂಬಂಧಪಟ್ಟ ಸಂಸ್ಥೆಗಳು ರೈತರ ಕೈಹಿಡಿದು ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಬಗ್ಗೆ ತಿಳುವಳಿಕೆ ಕೊಡುವುದು ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡುವುದು ಅತ್ಯವಶ್ಯಕವಾಗಿದ್ದು ಇದರಿಂದ ರೈತ ಬಾಂಧವರು ಹೆಚ್ಚಿನ ಲಾಭಗಳಿಸುವ ಅವಕಾಶವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಮಾತನಾಡಿ, ಈ ಮೌಲ್ಯವರ್ಧನೆ ತರಬೇತಿಯಲ್ಲಿ ಗ್ರಾಮೀಣ ಮಹಿಳೆಯರು ಸಿರಿಧಾನ್ಯಗಳನ್ನು ಉಪಯೋಗಿಸಿ ಅವರ ಮನೆಯಲ್ಲಿಯೇ ಸರಳವಾದ, ಆರೋಗ್ಯಕರ ಪದಾರ್ಥಗಳನ್ನು ತಯಾರಿಸಿ ಉಪಯೋಗಿಸಿಕೊಳ್ಳಲು ಪ್ರಾತ್ಯಕ್ಷಿಕೆ ಗಳನ್ನು ಮಾಡಿ ತೋರಿಸಲಾಗುವುದು ಎಂದರು. ತರಬೇತಿ ಪಡೆದ ಗ್ರಾಮೀಣ ಮಹಿಳೆಯರು ಮೊದಲು ತಮ್ಮ ಮನೆಯಲ್ಲಿ ಮೌಲ್ಯವರ್ಧನೆ ಮಾಡಿ ಉಪಯೋಗಿಸಲು ಪ್ರಾರಂಭಿಸಬೇಕು, ತದನಂತರ ತಾನಾಗಿಯೇ ಅಕ್ಕಪಕ್ಕದ ಊರಿನ ಜನರು ಇದನ್ನು ಅನುಸರಿಸುತ್ತಾರೆ ಎಂದು ತಿಳಿಸಿದರು.
ತರಬೇತಿಯಲ್ಲಿ ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆ, ಪೋಷಕಾಂಶಗಳು, ಸಿರಿಧಾನ್ಯಗಳ ಲಡ್ಡು, ಅವಲಕ್ಕಿ, ರವೆ, ಇಡ್ಲಿ ಮತ್ತು ಬಿಸ್ಕೆಟ್ಸ್ ಮುಂತಾದವುಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು. ಸಿರಿಧಾನ್ಯ ಮೂಲವರ್ಧನೆಯಲ್ಲಿ ತೊಡಗಿರುವ ಗ್ರಾಮೀಣ ಉದ್ದೆಮೆದಾರರ ಜೊತೆ ಸಂವಾದ ನಡೆಸಲಾಯಿತು.