ಮಲೇಬೆನ್ನೂರು, ನ.23- ವಿನಾಯಕನಗರ (ಜಿಗಳಿ ಕ್ಯಾಂಪ್) ಕ್ಯಾಂಪಿನ ಶ್ರೀ ಕೊದಂಡರಾಮ ದೇವಸ್ಥಾನದಲ್ಲಿ ಶ್ರೀ ಕೋದಂಡ ರಾಮಾಂಜನೇಯ ಸ್ವಾಮಿಯ ಶಿಲಾಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಹಾಗೂ ಸೀತಾರಾಮ ಕಲ್ಯಾಣ ಮಹೋತ್ಸವವು ಗುರುವಾರ ಸಂಭ್ರಮದಿಂದ ಜರುಗಿತು.
ಈ ಕಾರ್ಯಕ್ರಮದ ಅಂಗವಾಗಿ ಕಳೆದ 3 ದಿನಗಳಿಂದ ಪ್ರತಿನಿತ್ಯ ಪೂಜೆ, ಹೋಮ-ಹವನ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಸುದರ್ಶ ಹೋಮ, ನವಗ್ರಹ ಹೋಮದ ನಂತರ ಶಿಲಾಮೂರ್ತಿಗಳ ಮೆರವಣಿಗೆಯನ್ನು ಗ್ರಾಮದಲ್ಲಿ ವಿಜೃಂಭಣೆಯಿಂದ ಮಾಡಲಾಯಿತು. ರಾತ್ರಿ ಮುತ್ತೈದೆಯರಿಂದ ಶ್ರೀರಾಮ, ಲಕ್ಷ್ಮಿ, ಆಂಜನೇಯ ಸಹಸ್ರನಾಮ, ಅರ್ಚನೆ, ಕುಂಕುಮ ಪೂಜೆ ನೆರವೇರಿತು.
ಗುರುವಾರ ಬೆಳಿಗ್ಗೆ ವಿವಿಧ ಪೂಜೆಗಳ ನಂತರ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಸೀತಾರಾಮ ಕಲ್ಯಾಣೋತ್ಸವವು ಶ್ರದ್ಧಾ-ಭಕ್ತಿಯಿಂದ ಭಕ್ತರ ಸಮ್ಮುಖದಲ್ಲಿ ನಡೆಯಿತು.