ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವಸ್ತು ಪ್ರದರ್ಶನ ಸಹಕಾರಿ

ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವಸ್ತು ಪ್ರದರ್ಶನ ಸಹಕಾರಿ

ದಾವಣಗೆರೆ, ನ.19- ವಸ್ತುಪ್ರದರ್ಶನಗಳು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಎಂದು ಜೈನ್ ವಿದ್ಯಾಲಯದ ಅಧ್ಯಕ್ಷ ಹೆಚ್. ರಮೇಶ್ ಕುಮಾರ್ ಹೇಳಿದರು.

ನಗರದ ಶಾಮನೂರು ಬಳಿಯ ಸಿಬಿಎಸ್‌ಇ ಜೈನ್ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಹಮ್ಮಿಕೊಳ್ಳುವ ವಸ್ತುಪ್ರದರ್ಶನ ಕಾರ್ಯಕ್ರಮಗಳು ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದ್ದು, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಲಿವೆ ಎಂದರು.

ಚಂದ್ರಯಾನ-3 ಮೂಲಕ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಮುಂಚೆಯಲ್ಲ ಭಾರತವನ್ನು ಕಡೆಗಣಿಸುತ್ತಿದ್ದ ವಿಶ್ವದ ದೊಡ್ಡ ದೊಡ್ಡ ದೇಶಗಳು ಭಾರತದ ವಿಜ್ಞಾನಿಗಳ ಜೊತೆ ಕೆಲಸ ಮಾಡಲು ಉತ್ಸುಕವಾಗಿವೆ. ಅಮೆರಿಕದಂತಹ ದೊಡ್ಡ ದೇಶ ಇಸ್ರೋದ ಜೊತೆ ಕೆಲಸ ಮಾಡಲು ಕೋಟಿ ಕೋಟಿ ರೂ. ಆಫರ್‌ಗಳನ್ನು ಮಾಡಿದ್ದು, ಇಂತಹ ಹಂತಕ್ಕೆ ನಾವು ತಲುಪಿದ್ದೇವೆ. ಈ ದಾರಿಯಲ್ಲಿ ನಮ್ಮ ಮಕ್ಕಳನ್ನೂ ಸಹ ನಾವು ಬೆಳೆಸಬೇಕು ಎಂದರು.

ಶ್ರೀ ಭಗವಾನ್ ಮಹಾವೀರ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಜೆ. ರಮೇಶ್ ಕುಮಾರ್ ಮಾತನಾಡಿ, ಮಕ್ಕಳ ಕನಸುಗಳನ್ನು ನನಸು ಮಾಡಲು ವಸ್ತುಪ್ರದರ್ಶನ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಲಿವೆ. ಮಕ್ಕಳು ಜೀವನದಲ್ಲಿ ಮುಂದೆ ಏನಾಗಬಹುದು ಎಂಬ ಸೂಚನೆಯನ್ನು ವಸ್ತುಪ್ರದರ್ಶನ ಕಾರ್ಯಕ್ರಮಗಳು ನೀಡುತ್ತವೆ ಎಂದರು.

ಪಠ್ಯದಲ್ಲಿ ಬರುವ ವಿಷಯಗಳನ್ನು ಪ್ರಾಯೋಗಿಕವಾಗಿ ವಸ್ತು ಪ್ರದರ್ಶನದಲ್ಲಿ ತೋರಿಸಬಹುದು. ಮಕ್ಕಳು ವಸ್ತುಪ್ರದರ್ಶನದಲ್ಲಿ ಉತ್ಸುಕರಾಗಿ ಪಾಲ್ಗೊಳ್ಳುವುದರಿಂದ ಪಠ್ಯದಲ್ಲಿರುವ ವಿಷಯಗಳು ಚೆನ್ನಾಗಿ ಮನದಟ್ಟಾಗುತ್ತವೆ ಎಂದರು.

ಶಾಲೆಯ ಎಲ್.ಕೆ.ಜಿ ಮಕ್ಕಳಿಂದ ಹಿಡಿದು 10ನೇ ತರಗತಿಯ ಮಕ್ಕಳು ತಮ್ಮ ಪುಟ್ಟ ಪುಟ್ಟ ಕೈಗಳಲ್ಲಿ ಕಲಾ ಮತ್ತು ವಿಜ್ಞಾನ ಮಾದರಿಗಳನ್ನು ತಯಾರಿಸಿ, ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಾದ ಜಶ್ವಿ ಎನ್. ಜೈನ್ ನಾಲ್ಕು ಹಂತದ ನೀರು ಶುದ್ದೀಕರಣ ಘಟಕವನ್ನು, ಜಾಹ್ನವಿ ಹೆಚ್.ಎಸ್ ಪೆರಿಸ್ಕೋಪ್, ನಿಶ್ಚಿತಾ ಬಿ.ಪಿ ಮಿನಿ ಎಲೆಕ್ಟ್ರಿಕ್ ಸರ್ಕ್ಯೂಟ್, ರಾಜೇಶ್ವರಿ  ಫ್ರೀ ಎನರ್ಜಿ ಲೈಟ್, ತೃಪ್ತಿ  ಸೋಲಾರ್ ಸಿಸ್ಟಮ್, ತನ್ವಿಕಾ ಎಸ್, ಗೌರಿಕ ಹೆಚ್.ಕೆ  ಕಾರ್ಬನ್ ಪ್ಯೂರಿಫಿಕೇಷನ್, ರಿಯಾಂಶಿ, ವಿದ್ಯಾಶ್ರೀ ಮತ್ತು ಮಾನಸ ವಿದ್ಯುತ್ ತೊಟ್ಟಿಲು, ಸಂಪ್ರಿತಾ ಮತ್ತು ಸಿರಿ ಟಿ.ಜಿ ಆಡ್ ಸುರಿಸುವ ಮಳೆ, 9ನೇ ತರಗತಿಯ ವಿದ್ಯಾರ್ಥಿ ಮೇಘನಾ ಮನುಷ್ಯನ ಕಣ್ಣು, ಚೇತನ ಮತ್ತು ಅಭಿಜ್ಞ ಹನಿ ನಿರಾವರಿ ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅನೇಕ ರೀತಿಯ ಮಾದರಿಗಳನ್ನು ತಯಾರಿಸಿದ್ದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಅನಿತಾ ರಜಪೂತ್, ಸಯೀದಾ ಖಾನಂ, ಕುಮಾರ್ ಗಾಂಧಿ, ಪ್ರಕಾಶ್ ಜೈನ್ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!