ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ತರಳಬಾಳು ಶ್ರೀ ಕಿವಿಮಾತು
ಸಿರಿಗೆರೆ, ನ.16- ತಂದೆಯ ಗರಡಿಯಲ್ಲಿ ಬೆಳೆದು, ರಾಜಕೀಯದಲ್ಲಿ ಅನುಭವ ಇರುವ ನೀವು ಉನ್ನತ ಮಠಕ್ಕೆ ಏರುತ್ತೀರಿ ಎಂಬ ಪೂರ್ಣ ಭರವಸೆ ಇದೆ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನುದ್ದೇಶಿಸಿ ಹೇಳಿದರು.
ಗುರುವಾರ ಬಿ.ವೈ.ವಿಜಯೇಂದ್ರ ಸಿರಿಗೆರೆಗೆ ಮಠಕ್ಕೆ ಆಗಮಿಸಿದಾಗ ಶ್ರೀಗಳು ಅವರನ್ನು ಸತ್ಕರಿಸಿದರು.
ದೇಶದಲ್ಲಿ ಇಂದು ರಾಜಕಾರಣಿಗಳು ಪರಸ್ಪರ ನಿಂದನೆಗೆ ಇಳಿಯುತ್ತಿದ್ದಾರೆ. ಇದಕ್ಕೆ ಇತಿಶ್ರೀ ಹಾಡಬೇಕು. ವೈಯಕ್ತಿಕ ಆರೋಪ, ಪ್ರತ್ಯಾರೋಪ ದೊಡ್ಡ ತಪ್ಪು. ಅವಾಚ್ಯ ಶಬ್ದ ಗಳನ್ನು ಬಳಸಿ ದೋಷಾರೋಪ ಮಾಡುವುದು ಸರಿಯಲ್ಲ. ಇದಕ್ಕೆ ನ್ಯಾಯಾಲಯಗಳಿವೆ. ಹೀಗೆ ಮಾಡುವುದರಿಂದ ಮನಸ್ಸು ಕಲುಷಿತವಾಗಿ ಶಾಂತಿ ಕದಡುತ್ತದೆ ಎಂದರು.
ಸಾರ್ವಜನಿಕ ಸಭೆಗಳಲ್ಲಿ ಯಾರನ್ನೂ ನಿಂದಿಸದೆ, ಜವಾಬ್ದಾರಿ ಸ್ಥಾನದಲ್ಲಿದ್ದಾಗ ಸಾಮಾ ಜಿಕವಾಗಿ ಜನರಿಗಾಗಿ, ರೈತರ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು. ಪಕ್ಷದ, ರಾಜ್ಯದ ಹಿತದೃಷ್ಟಿಯಿಂದ ಎಲ್ಲ ಹಿರಿ ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಜನಪರ ಕೆಲಸಗಳನ್ನು ಮಾಡಿ ಎಂದರು.
ಯಡಿಯೂರಪ್ಪನವರು ಹಾಗೂ ನಮ್ಮ ಮಠದ ಸಂಬಂಧ ಶಿಕಾರಿಪುರದಲ್ಲಿ ನಡೆದ ತರಳಬಾಳು ಹುಣ್ಣಿಮೆಯಿಂದ ಗಟ್ಟಿಗೊಂಡು ಬಂದಿದೆ. ಅವರು ನಾವು ಸೂಚಿಸಿದ ಸಮಾಜದ ಯೋಜನೆಗಳಿಗೆ ಹಣ ಮಂಜೂರು ಮಾಡಿದ್ದು ಉತ್ತಮ ಕೆಲಸ ಎಂದು ಶ್ರೀಗಳು ಹೇಳಿದರು.
ಸಿರಿಗೆರೆಯ ಬೃಹನ್ಮಠದ ಐಕ್ಯಮಂಟಪದಲ್ಲಿ ಲಿಂ.ಶಿವಕುಮಾರ ಶ್ರೀಗಳು ಹಾಗೂ ಗುರುಶಾಂತೇಶ್ವರ ಸ್ವಾಮೀಜಿಯವರ ಕರ್ತೃ ಗದ್ದಿಗೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ರೈತರ, ಬಡವರ ಪರವಾಗಿ ಇರುವುದು ನಮ್ಮ ಪಕ್ಷ. ಪಕ್ಷದ ಹಿರಿಯರು ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ನನ್ನ ಮುಂದಿನ ಯಶಸ್ಸಿಗೆ ಶ್ರೀಗಳ ಆಶೀರ್ವಾದ ಮುಖ್ಯ ಎಂದರು.
ಮಾಜಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಮಾಜಿ ಸಂಸದರಾದ ನಾರಾಯಣಸ್ವಾಮಿ, ಜನಾರ್ದನಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಅನಿತ್ಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶೈಲೇಶ್ಕುಮಾರ್, ಮುಖಂಡರಾದ ಜಿ.ಬಿ.ತೀರ್ಥಪ್ಪ, ಕೆ.ಎನ್.ಬಿ.ಮೋಹನ್, ಸಂದೀಪ್ ಹಂಚಿನಮನೆ, ಬಸವರಾಜ್, ಪಂಚಾಕ್ಷರಿ, ತುಮ್ಕೋಸ್ ಶಿವಕುಮಾರ್, ಭರಮಸಾಗರ ಎಸ್.ಐ.ರವಿನಾಯ್ಕ್ ಇತರರು ಈ ಸಂದರ್ಭದಲ್ಲಿದ್ದರು.