ಕೃಷಿ ವಿಜ್ಞಾನಿಗಳೊಂದಿಗೆ ಸಿರಿಗೆರೆಯ ರೈತರ ಸಂವಾದ
ಸಿರಿಗೆರೆ, ಅ.3- ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಲಿಂ. ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಕಾರ್ಯ ಕರ್ತರಿಗೆ ಅಭಿನಂದನಾ ಸಮಾರಂಭ ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮವು ತರಳಬಾಳು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿನ್ನೆ ಜರುಗಿತು.
ಲಿಂ. ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿಯ ಯಶಸ್ಸಿಗೆ ಸೇವೆ ಸಲ್ಲಿಸಿದ ಎಲ್ಲಾ ಕಾರ್ಯಕರ್ತರಿಗೂ, ಹೆಚ್ಚಿನ ಮಟ್ಟದಲ್ಲಿ ಆಹಾರ ಸಾಮಗ್ರಿಗಳನ್ನು ಒದಗಿಸಿದ ಹಾಗೂ ಶ್ರೀಗಳ ಮೇಲಿನ ಭಕ್ತಿ, ಶ್ರದ್ಧೆ, ಕೃತಜ್ಞತೆಗೆ ಭಕ್ತಿ ಸಮರ್ಪಿಸಿದ ಭಕ್ತಾದಿಗಳಿಗೆ ಶ್ರೀಗಳು ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನ ಕೃಷಿ ವಿಜ್ಞಾನಿಗಳಾದ ಹಾಗೂ ಏರೋಬಿಕ್ ಭತ್ತದ ತಜ್ಞ ಎಂದೇ ಪ್ರಖ್ಯಾತಿ ಪಡೆದ ಪ್ರೊ. ಹೆಚ್.ಇ.ಶಶಿಧರ್ ಮಾತನಾಡಿ, ಕಡಿಮೆ ನೀರಿನಲ್ಲಿ ಏರೋಬಿಕ್ ಭತ್ತದ ಬೆಳೆ ಬೆಳೆಯುವ ತಳಿ ಅಭಿವೃದ್ಧಿ ಪಡಿಸಿರುವ ತಳಿ ಏರೋಬಿಕ್ ಭತ್ತದ ತಳಿಯಾಗಿದೆ.
ಒಂದು ಕೆಜಿ ಭತ್ತ ಬೆಳೆಯಲು ಸಾಮಾನ್ಯವಾಗಿ 5,000 ಲಿ. ನೀರಿನ ಅವಶ್ಯಕತೆ ಇರುತ್ತದೆ. ಆದರೆ ನಾವು ಅಭಿವೃದ್ಧಿಪಡಿಸುವ ಭತ್ತದ ತಳಿಯಲ್ಲಿ ಭತ್ತ ಬೆಳೆಯಲು ಕೇವಲ 500 ರಿಂದ 2000 ಲಿ. ನೀರು ಮಾತ್ರ ಸಾಕಾಗುತ್ತದೆ. ಇದರಿಂದ ನೀರಿನ ಪ್ರಮಾಣ ಉಳಿತಾಯವಾಗುತ್ತದೆ. ಬೇರು ಆಳ ಇದ್ದಷ್ಟು ನೀರಿನ ಅವಶ್ಯಕತೆ ಕಡಿಮೆಯಾಗುತ್ತಾ ಹೋಗುತ್ತದೆ. ಬೇರುಗಳು ಮೇಲ್ಪದರದಲ್ಲಿ ಇದ್ದರೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ ಎಂದರು.
ಒಂದು ಎಕರೆಯಲ್ಲಿ ಭತ್ತ ಬೆಳೆಯಲು 10 ರಿಂದ 13 ಸಾವಿರ ಖರ್ಚು ಬರುತ್ತದೆ. ಭತ್ತ ಬೆಳೆಯಲು ಸೂರ್ಯನ ಕಿರಣ ಅತಿ ಮುಖ್ಯ. ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಜಾನುವಾರುಗಳ, ಕುರಿ, ಕೋಳಿ ಗೊಬ್ಬರಗಳ ಜೊತೆಗೆ ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಸಹ ನಾವು ಸಾಕಬೇಕಿದೆ. ಇದರಿಂದ ರೈತರು ಅನೇಕ ಉಪಯೋಗಗಳನ್ನು ಪಡೆಯಬಹುದಾಗಿದೆ. ಎಂದರು.
ಶ್ರೀಗಳ ಆಶಯದಂತೆ ಎಲ್ಲಾ ರೈತರಿಗೆ ಅನುಕೂಲವಾಗಲು ಶಾಂತಿವನದಲ್ಲಿ ಪ್ರಾಯೋಗಿಕವಾಗಿ ಹನಿ ನೀರಾವರಿ ಮೂಲಕ ಒಂದು ಎಕರೆಯಲ್ಲಿ ಏರೋಬಿಕ್ ಭತ್ತದ ಬಿತ್ತನೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಈಗಾಗಲೇ ಸೂಕ್ತ ಸ್ಥಳವನ್ನು ನಿಗದಿ ಮಾಡಲಾಗಿದೆ. ಒಂದು ವಾರದ ಒಳಗೆ ಬಿತ್ತನೆ ಕಾರ್ಯ ಜರುಗಲಿದೆ.
ದುಬೈನ ಅಬುದಾಬಿಯ ಮರು ಭೂಮಿಯಲ್ಲಿಯೂ ಸಹ ಭತ್ತ ಬೆಳೆದು ಕೃಷಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಅದರ ವಿಡಿಯೋ ಹಾಗೂ ಫೋಟೋ ತುಣುಕುಗಳನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಮಣ್ಣಿನ ವಿಶೇಷ ತಜ್ಞರಾದ ಎನ್.ಬಿ ಪ್ರಕಾಶ್, ಬೆಂಗಳೂರಿನ ನಿವೃತ್ತ ಕೃಷಿ ವಿಜ್ಞಾನಿ ಎನ್.ಆರ್ ಗಂಗಾಧರಪ್ಪ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ ರಂಗನಾಥ್, ಆಡಳಿತಾಧಿಕಾರಿ ಡಾ.ಹೆಚ್.ವಿ.ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷರಾದ ಬಿ.ಎಸ್ ಮರಳಸಿದ್ದಯ್ಯ, ದಾವಣಗೆರೆ ಶಿವಸೇನೆಯ ಅಧ್ಯಕ್ಷ ಶಶಿಧರ್ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.