ವಿಶ್ವಚೇತನ ಕಾಲೇಜಿನಲ್ಲಿನ ಗಾಂಧೀಜಿ-ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ರೆಡ್ಡಿ ಆಶಯ
ದಾವಣಗೆರೆ, ಅ. 2- ಸ್ವಚ್ಛತೆಯನ್ನು ನಮ್ಮ ನಿತ್ಯ ಜೀವನದಲ್ಲಿ ಹವ್ಯಾಸವನ್ನಾಗಿ ರೂಢಿಸಿಕೊಳ್ಳಬೇಕು. ಗಾಂಧೀಜಿ ಮತ್ತು ಶಾಸ್ತ್ರೀಜಿಯಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವ ಮೂಲಕ ಅವರ ಆದರ್ಶಗಳನ್ನು ನಮ್ಮಲ್ಲಿಯೂ ರೂಢಿಸಿಕೊಂಡು ಭಾರತ ರಾಮ ರಾಜ್ಯವಾಗಬೇಕು ಎಂಬ ಅವರ ಕನಸನ್ನು ನನಸು ಮಾಡಲು ಪ್ರಯತ್ನಿಸೋಣ ಎಂದು ಪ್ರಾಂಶುಪಾಲ ಸತ್ಯನಾರಾಯಣ ರೆಡ್ಡಿ ತಿಳಿಸಿದರು.
ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಶ್ರಮದಾನ ಕಾರ್ಯಕ್ರಮದೊಂದಿಗೆ ನಡೆದ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ಅಹಿಂಸೆ, ಸತ್ಯ, ಧರ್ಮ, ನ್ಯಾಯ, ನೀತಿಗಳನ್ನು ಸತ್ಯಾಗ್ರಹದ ಊರುಗೋಲುಗಳನ್ನಾಗಿಸಿಕೊಂಡು ಸ್ವಾತಂತ್ರ್ಯ ಹೋರಾಟ ನಡೆಸಿದವರು. ಉತ್ತಮ ಬರವಣಿಗೆ ಪರಿಪೂರ್ಣ ಶಿಕ್ಷಣದ ಅವಶ್ಯವಾದ ಅಂಶ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂಬ ಗಾಂಧೀಜಿಯವರ ಅನುಭವವನ್ನು ಶಿಕ್ಷಕ ಯರ್ರಿಸ್ವಾಮಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ದೇಶದ ಎರಡನೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವದೊಂದಿಗೆ ದೇಶವನ್ನು ಮುನ್ನಡೆಸಿದ ಮಹಾಧೀಮಂತ ವ್ಯಕ್ತಿ. ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ರೈಲು ದುರಂತದ ಹೊಣೆಯನ್ನು ತಾವೇ ಹೊತ್ತು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ ನಿಷ್ಠಾವಂತ ಸಚಿವರು ಎಂಬುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. 1965ರ ಇಂಡಿಯಾ ಮತ್ತು ಪಾಕ್ ಯುದ್ಧದಲ್ಲಿ `ಜೈ ಜವಾನ್ ಜೈ ಕಿಸಾನ್’ ಎಂಬ ಹೇಳಿಕೆಯನ್ನು ನೀಡಿ ಸೈನಿಕರನ್ನು ಹುರಿದುಂಬಿಸಿದರು. ಇಂತಹ ಮಹಾನ್ ಚೇತನಗಳು ನಮ್ಮೆಲ್ಲರಿಗೂ ಇಂದು ಆದರ್ಶವಾಗಿವೆ. ನಾವು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿನೋದ್, ಬಿ.ಎಂ. ಬಸವರಾಜಯ್ಯ, ಶ್ರೀನಿವಾಸ್ ಮೂರ್ತಿ, ಯುವರಾಜ್, ರೇವಣಸಿದ್ದಪ್ಪ ಉಪಸ್ಥಿತರಿದ್ದರು.
ಕು. ಖುಷಿ ಸ್ವಾಗತಿಸಿದರು. ಪ್ರೀತಮ್ ರಾಜ್ ಚೌವ್ಹಾಣ್ ವಂದಿಸಿದರು. ಗೌರಿಶ್ರೀ ನಿರೂಪಿಸಿದರು.