ಹರಿಹರ, ಸೆ. 7 – ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಆರೋಗ್ಯ ಮಾತೆಯ ಬಸಿಲಿಕ ಚರ್ಚ್ ಇಂದು ನಡೆಯ ಲಿರುವ ಆರೋಗ್ಯ ಮಾತೆಯ ಮಹೋತ್ಸವಕ್ಕೆ ಎಲ್ಲಾ ರೀತಿಯಲ್ಲಿ ಸಿದ್ಧಗೊಂಡಿದೆ.
ಹಲವಾರು ವರ್ಷಗಳಿಂದ ಸೆ. 8 ರಂದು ಆಚರಿಸಿಕೊಂಡು ಬರಲಾಗುತ್ತಿರುವ ಆರೋಗ್ಯ ಮಾತೆ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಇಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಈ ಉತ್ಸವ §ಮಾತೆ ಮರಿಯಳ ಜೀವನ-ವನಿತೆಯರ ಬಾಳಿಗೆ ಪ್ರೇರಣ’ ಎಂಬ ಧ್ಯೇಯ ವಾಕ್ಯ ದೊಂದಿಗೆ ಆಗಸ್ಟ್ 30 ರಂದು ಸಂಜೆ ಧ್ವಜಾರೋಹಣದೊಂದಿಗೆ ಆರಂಭಗೊಂಡು ಸೆಪ್ಟಂಬರ್ 9 ರಂದು ಸಂಪನ್ನವಾಗಲಿದೆ.
ಆ.30 ರ ಬುಧವಾರ ದಿಂದ ಸೆ.7 ರ ಗುರುವಾರದ ವರೆಗೆ ಪ್ರತಿದಿನ ಸಂಜೆ 5.30ಕ್ಕೆ ಮೆರವಣಿಗೆ, ನವೇನ, ಪುಷ್ಪಾರ್ಪಣೆ, ಪವಿತ್ರ ಬಲಿಪೂಜೆ, ಪರಮ ಪ್ರಸಾದ ಆರಾಧನೆ, ರೋಗ ಸೌಖ್ಯಕ್ಕಾಗಿ ಪ್ರಾರ್ಥನೆ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನೆರವೇರಿವೆ.
ಸೆ.8 ಶುಕ್ರವಾರ ಬೆಳಗ್ಗೆ 5.15 ಕ್ಕೆ ಕನ್ನಡ, 6.15 ಕ್ಕೆ ತೆಲುಗು, 7.15 ಕ್ಕೆ ಭದ್ರಾವತಿಯ ಧರ್ಮಧ್ಯಕ್ಷರಾದ ಪರಮಪೂಜ್ಯ ಡಾ ಜೋಸೆಫ್ ಅರುಮಾಚಾಡತ್ ರಿಂದ ಸಿರು ಮಲಬಾರ್ ವಿಧಿ ಪ್ರಕಾರ ಮಲಯಾಳಂನಲ್ಲಿ, 8.45 ಕ್ಕೆ ತಮಿಳು, 10 ಕ್ಕೆ ಇಂಗ್ಲೀಷ್, 10.45 ಕ್ಕೆ ಶಿವಮೊಗ್ಗ ಧರ್ಮಧ್ಯಕ್ಷರಿಗೆ ಸ್ವಾಗತ ಕೋರುವದು. 11 ಕ್ಕೆ ಪರಮಪೂಜ್ಯ ಡಾ. ಪ್ರಾನ್ಸಿಸ್ ಸೆರಾವೋ ಎಸ್.ಜೆ.ರವರಿಂದ ಕನ್ನಡದಲ್ಲಿ ಸಹ ಬಲಿ ಪೂಜೆ, ಮಧ್ಯಾಹ್ನ 1.15 ಕ್ಕೆ ಕೊಂಕಣಿ, 2.30 ಕ್ಕೆ ಯೇಸು ಸ್ಪರ್ಶ ತಂಡದಿಂದ ಪರಮ ಪ್ರಸಾದದ ವಿಶೇಷ ಆರಾಧನೆ ನಡೆಯಲಿದೆ. ಸಂಜೆ 5 ಕ್ಕೆ ಸೇವಂತಿಗೆ ಪುಷ್ಪಾಲಂಕೃತ ವಾದ ತೇರಿನ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ.
ಸೆ.9 ರ ಶನಿವಾರ ಬೆಳಗ್ಗೆ 8 ಕ್ಕೆ, 10.30ಕ್ಕೆ, ಮಧ್ಯಾಹ್ನ 12.00 ಕ್ಕೆ, 3 ಕ್ಕೆ ಬಲಿ ಪೂಜೆ ಇರುವವು. ಬೆಳಗ್ಗೆ 9.00 ಕ್ಕೆ ಪೂಜಾರ್ಪಣೆ ನಂತರ ಯಾತ್ರಿಕರ ವಾಹನಗಳನ್ನು ಆಶೀರ್ವದಿಸಲಾಗುವುದು ಎಂದು ಆರೋಗ್ಯ ಮಾತೆಯ ಬಸಿಲಿಕ ಧರ್ಮಗುರು ಫಾದರ್ ಕೆ.ಎ. ಜಾರ್ಜ್ ತಿಳಿಸಿದ್ದಾರೆ.
ಈ ಬಾರಿಯ ಆರೋಗ್ಯ ಮಾತೆಯ ಮಹೋತ್ಸವಕ್ಕೆ 140x 120 ದೊಡ್ಡ ವಾಟರ್ ಪ್ರೂಫ್ ಪೆಂಡಾಲನ್ನು ಹಾಕಲಾಗಿದ್ದು ಆಗಮಿಸಿದ, ಭಕ್ತಾದಿಗಳು ಕುಳಿತುಕೊಳ್ಳುವ ಸಲುವಾಗಿ 3000ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಈ ಹಿಂದೆ ಭಕ್ತಾದಿಗಳು ಎಲ್ಲೆಂದರಲ್ಲಿ ಅಡಿಗೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯು ತ್ತಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಚರ್ಚಿನ ಪಕ್ಕದಲ್ಲಿ ವಿಶಾಲವಾದ ವಾಟರ್ ಪ್ರೂಫ್ ಪೆಂಡಾಲನ್ನು ಹಾಕಲಾಗಿದೆ. ಇದರಿಂದ ಅಡಿಗೆ ತಯಾರಿಸಿ ಕೊಳ್ಳುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.
ನಗರದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ದಿಡೂ ನಮಸ್ಕಾರ ಹಾಕಿ ಹರಕೆಯನ್ನು ತೀರಿಸಿಕೊಳ್ಳುವ ಭಕ್ತರಿಗೆ ನದಿಯ ದಂಡೆಯ ಮೇಲೆ ಎಲ್ಲಾ ರೀತಿಯ ವ್ಯವಸ್ಥೆ ಕೂಡ ಮಾಡಲಾಗಿದೆ.
ಮಕ್ಕಳ ಮನೋರಂಜನೆಗಾಗಿ ಜಾಯಿಂಟ್ ವೀಲ್, ತಿರುಗುವ ತೊಟ್ಟಿಲು ಸೇರಿದಂತೆ ಹಲವಾರು ವಿಶೇಷ ಆಕರ್ಷಣೆ ವಸ್ತುಗಳು ಆಗಮಿಸಿವೆ.
ಅಲ್ಲದೇ ವಸ್ತುಗಳ ಖರೀದಿಗಾಗಿ ಸ್ಟಾಲ್‌ಗಳು ಆರಂಭಗೊಂಡಿವೆ. ವಿವಿಧ ಅಲಂಕಾರಿಕ ವಸ್ತುಗಳು, ರೆಡಿಮೇಡ್ ಬಟ್ಟೆಗಳು, ಅಲಂಕಾರಿಕ ಹೂಗಳು ಇವೆಲ್ಲವುಗಳ ಮಾರಾಟ ಜೋರಾಗಿದೆ.