ಭಗವಾನ್ ಶ್ರೀ ಕೃಷ್ಣ ಮಹಾನ್ ಮಾನವತಾವಾದಿ

ಭಗವಾನ್ ಶ್ರೀ ಕೃಷ್ಣ ಮಹಾನ್ ಮಾನವತಾವಾದಿ

ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಸೆ.7- ಭಗವದ್ಗೀತೆ ಮೂಲಕ ಅಧ್ಯಾತ್ಮಿಕ ಸಂದೇಶ ನೀಡಿದ ಭಗವಾನ್ ಶ್ರೀ ಕೃಷ್ಣ ಮಹಾನ್ ಮಾನವತಾವಾದಿ. ಅವರ ಸಂದೇಶಗಳಲ್ಲಿ ವರ್ಗ, ವರ್ಣ ಹಾಗೂ ಲಿಂಗ ಭೇದಗಳಿಗೆ ಸ್ಥಾನವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಯಾದವ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕೃಷ್ಣನು 8ನೇ ಅವತಾರ ಪುರುಷನಾಗಿ ಜನ್ಮ ತಾಳಿದ್ದು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಮೂಲಕ ಅಧರ್ಮವನ್ನು ಅಳಿಸಿ, ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ ಎಂದರು.

ಎಲ್ಲರೂ ಅಧ್ಯಾತ್ಮಿಕವಾಗಿ ಸಮಾನರು. ನಿನ್ನ ಉದ್ಧಾರ ನಿನ್ನ ಕೈಯಿಂದಲೇ ಆಗಬೇಕು ಎಂಬುದು ಶ್ರೀ ಕೃಷ್ಣನ ದಿವ್ಯ ಸಂದೇಶವಾಗಿದೆ ಎಂದು ಶ್ರೀ ಕೃಷ್ಣನಿಗೆ ಸಂಬಂಧಿಸಿದ ಶ್ಲೋಕ ಮತ್ತು ಹಾಡುಗಳನ್ನು ಹೇಳುವ ಮೂಲಕ ಸಭಿಕರನ್ನು ರಂಜಿಸಿದರು.

ಯಾದವ ಸಮಾಜದ ಸಮುದಾಯ ಭವನಕ್ಕೆ ನಿವೇಶನ ಲಭ್ಯ ಇದ್ದು, ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸದ್ಯ ಮಾರ್ಚ್‍ವರೆಗೆ ಅನುದಾನ ಇಲ್ಲ. ನಂತರ ಎಲ್ಲಾ ಸಮುದಾಯಗಳಿಗೆ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಚಿತ್ರದುರ್ಗ ಗೊಲ್ಲಗಿರಿ ಕ್ಷೇತ್ರ ಯಾದವ ಮಹಾಸಂಸ್ಥಾನದ ಶ್ರೀ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ,
ಶ್ರೀಕೃಷ್ಣ ಪರಮಾತ್ಮನು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲಕ್ಕೆ ದಿವ್ಯ ಸಂದೇಶವನ್ನು ಸಾರಿದ್ದಾರೆ ಎಂದರು.

ಯಾದವ ಸಮುದಾಯ ನಿರ್ಮಾಣಕ್ಕೆ ಶಾಸಕರು ಮಾರ್ಚ್ ನಂತರ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರಿಗೆ ನಮ್ಮ ಸಮಾಜ ಚಿರಋಣಿಯಾಗಿರಲಿದೆ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪಕ್ಷಭೇದ ಮರೆತು ಸಂಘಟಿತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಯಾವುದೇ ಜಯಂತಿಗಳನ್ನು ಕೇವಲ ಮೆರವಣಿಗೆ ಮತ್ತು ನೃತ್ಯಕ್ಕೆ  ಸೀಮಿತವಾಗದೆ ದಾರ್ಶನಿಕರು ಮತ್ತು ಮಠಾಧೀಶರ ಹಿತ ನುಡಿಗಳಿಗೆ ಮೀಸಲಿಟ್ಟು ಜಾಗೃತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕೆಂದು ಕಿವಿಮಾತು ಹೇಳಿದರು. 

ಯಾದವ ಸಮಾಜದ ವತಿಯಿಂದ ಬೆಂಗಳೂರಿನ ಸಿಎಸ್‍ಐಆರ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಹಿರಿಯ ಸಂಶೋಧಕ, ಸಮಾಜದ ಶಿಕ್ಷಕ ಕೆ.ಟಿ.ಚಿಕ್ಕಣ್ಣನವರ ಪುತ್ರ ಧನಂಜಯ್ ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸದರ ಪುತ್ರ ಅನಿತ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯ್ಯಮ್ಮ ಬಾಲರಾಜ್, ಯಾದವ ಸಮಾಜದ ಅಧ್ಯಕ್ಷ ಜಿ.ಸಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಪ್ರಕಾಶ್, ಕಾಡುಗೊಲ್ಲ ಯುವ ಸೇನೆ ಅಧ್ಯಕ್ಷ ಇಂದ್ರೇಶ್, ಕಾರ್ಯದರ್ಶಿ ತಿಪ್ಪೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಕಲ್ಲೇಶ್‌ರಾಜ್ ಪಟೇಲ್, ಸಿ.ತಿಪ್ಪೇಸ್ವಾಮಿ, ಬಿ.ಮಹೇಶ್ವರಪ್ಪ, ಶಿವಕುಮಾರ್ ಒಡೆಯರ್, ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ, ಟಿ.ಚಿತ್ತಪ್ಪ, ಜೀವಣ್ಣ, ಕೆ.ಟಿ.ಚಿಕ್ಕಣ್ಣ, ಮಹಾಲಿಂಗಪ್ಪ, ರಮೇಶ್, ಬಾಲರಾಜ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!