ಕೊಟ್ಟೂರು : ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ತಹಶೀಲ್ದಾರ್ ಜಿ.ಕೆ.ಅಮರೇಶ್
ಕೊಟ್ಟೂರು, ಆ.22- ವಿಜಯನಗರ, ಬಳ್ಳಾರಿ ಮತ್ತು ಕೊಟ್ಟೂರು ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಹಾಗೂ ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜ್ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕೊಟ್ಟೂರು ತಹಶೀಲ್ದಾರ್ ಅಮರೇಶ್ ಜಿ.ಕೆ. ಮಾತನಾಡಿ, ಸದೃಢವಾದ ದೇಹ ಹೊಂದಿದ್ದರೆ ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ, ಆದ್ದರಿಂದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಚಟುವಟಿಕೆಗಳ ಜೊತೆ ಪಠ್ಯೇತರ ಚಟುವಟಿಕೆಗಳು ಕೂಡ ಬಹು ಮುಖ್ಯ. ಸೋಲು-ಗೆಲುವಿನ ಕಡೆಗೆ ಗಮನ ಕೊಡದೆ ಕ್ರೀಡೆಗಳಲ್ಲಿ ಭಾಗವಹಿಸಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ, ಕ್ರೀಡೆಗಳು ಜೀವನದ ಅನುಭವವನ್ನು ಕಟ್ಟಿಕೊಡುವಂತವುಗಳು. ಮುಂದಿನ ಜೀವನದ ಭವಿಷ್ಯಕ್ಕೆ ಸಹಕಾರಿ ಎಂದರು.
ಕೊಟ್ಟೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್ ಕ್ರೀಡಾ ಜ್ಯೋತಿ ಬೆಳಗಿಸಿದರು. ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಶಾಂತ್ ಕುಮಾರ್ ಎಂ. ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ರವಿಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಬಣಕಾರ್ ಬಸವರಾಜ್ ಕ್ರೀಡಾ ತಂಡಗಳನ್ನು ಪರಿಚಯಿಸಿದರು.
ತಾಲ್ಲೂಕಿನ ವಿವಿಧ ಕಾಲೇಜುಗಳ ಪದವಿ ಪೂರ್ವ ಪ್ರಾಚಾರ್ಯರುಗಳಾದ ಪ್ರದೀಪ್ ಬೂಸ್ನೂರು ಮಠ್, ಶ್ರೀಮತಿ ನಿರ್ಮಲ ಶಿವನಗುತ್ತಿ, ಸಂತೋಷ್ ಕುಮಾರ್, ಜಗದೀಶ್ ಚಂದ್ರ ಬೋಸ್ ಹಾಗೂ ಇತರರು ಉಪಸ್ಥಿತರಿದ್ದರು. ಬಿ. ಎಸ್. ಪಾಟೀಲ್ ಸ್ವಾಗತಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ಹಾಗೂ ಕೆ.ಎಂ. ಪ್ರಭಾಕರ್ ನಿರೂಪಿಸಿದರು.