ಹರಪನಹಳ್ಳಿ, ಮೇ 21- ಇಂದಿನ ಯುವಕರು ಅತೀ ಹೆಚ್ಚು ಮದ್ಯಪಾನಕ್ಕೆ ದಾಸರಾಗುತ್ತಿದ್ದು, ತನ್ನ ಕುಟುಂಬದ ಜವಾಬ್ದಾರಿ ಮರೆತು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ತಾಂಡಾ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕ ಲಿಂಬ್ಯಾನಾಯ್ಕ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಜರುಗಿದ ನವಜೀವ ನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಪೀಳಿಗೆ ತಂದೆ-ತಾಯಿಯರಿಂದ ದೂರ ಇದ್ದು ಮದ್ಯಪಾನ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಹೆಗ್ಗಡೆ ಮಾತೃಶ್ರೀ ಹೇಮಾವತಿ ಅಮ್ಮನವರು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಅಪಾರವಾದ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಯೋಜನಾಧಿಕಾರಿ ಸುಬ್ರಮಣ್ಯ ಮಾತನಾಡಿ, ತಾಲ್ಲೂಕಿನಲ್ಲಿ ಐದು ಮದ್ಯವರ್ಜನೆ ಶಿಬಿರಗಳು ನಡೆದಿದ್ದು, ತುಂಬಾ ಜನರು ಪಾನಮುಕ್ತರಾಗಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದಾರೆ. ಈ ತಾಲ್ಲೂಕಿನ ಜನರು ಸ್ವ-ಉದ್ಯೋಗ, ಕೃಷಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಮಾತನಾಡಿ, ನವಜೀವನ ಸಮಿತಿ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಿ. ತಾಲ್ಲೂಕಿನಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನವಜೀವನ ಸಮಿತಿ ರಚನೆ ಆಗಲಿ, ಜನ ಜಾಗೃತಿ ವೇದಿಕೆಯ ಮುಖಾಂತರ ಸ್ವ-ಉದ್ಯೋಗದ ಪರಿಕಲ್ಪನೆಯಂತೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಕಂಪ್ಯೂಟರ್ ತರಬೇತಿ, ಟಿವಿ ರಿಪೇರಿ, ಮೊಬೈಲ್ ರಿಪೇರಿ, ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿಯನ್ನೂ ಸಹ ರುಡ್ ಸೆಟ್ ಸಂಸ್ಥೆಯ ಮುಖಾಂತರ ನವ ಜೀವನ ಸಮಿತಿ ಸದಸ್ಯರಿಗೆ ತರಬೇತಿಯನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಾನಮುಕ್ತ ಸದಸ್ಯರನ್ನು ಗೌರವಿಸಲಾಯಿತು. ಮೇಲ್ವಿಚಾರಕ ರಕ್ಷಿತ್, ಆರೋಗ್ಯ ಸಹಾಯಕ ವೆಂಕಟೇಶ್ ಸೇರಿದಂತೆ ಇತರರು ಇದ್ದರು.