ಸಾಂಸ್ಕೃತಿಕ, ಸಾಹಿತ್ಯಿಕ ಪರಿಕಲ್ಪನೆ ಮೂಡಿಸಲು ಬೇಸಿಗೆ ಶಿಬಿರ ಸೂಕ್ತ

ಸಾಂಸ್ಕೃತಿಕ, ಸಾಹಿತ್ಯಿಕ ಪರಿಕಲ್ಪನೆ ಮೂಡಿಸಲು ಬೇಸಿಗೆ ಶಿಬಿರ ಸೂಕ್ತ

ದಾವಣಗೆರೆ, ಮೇ 21 – ವಿದ್ಯಾಭ್ಯಾಸದಲ್ಲಿ ಮಕ್ಕಳು ಕೇವಲ ಪಠ್ಯಪುಸ್ತಕ ಪರೀಕ್ಷೆಗಳಿಗೆ ಅಷ್ಟೇ ಸೀಮಿತವಾಗದೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಕಡೆಗೆ ಹೆಚ್ಚು ಹೊತ್ತು ಕೊಟ್ಟಾಗ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‍ಶೆಣೈ ಪ್ರತಿಪಾದಿಸಿದರು. 

ನಗರದ ಕಲಾಕುಂಚ ಡಿಸಿಎಂ ಶಾಖೆ ಮತ್ತು ಗೋಲ್ಡನ್ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಸಭಾಂಗಣದಲ್ಲಿ ಕಳೆದ ವಾರ ಹಮ್ಮಿಕೊಳ್ಳಲಾದ ಮಕ್ಕಳ ಬೇಸಿಗೆ ಶಿಬಿರ ಚಿನ್ನರ ಚಿಲಿಪಿಲಿ ಸರಳ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಸಾಂಸ್ಕೃತಿಕ ಸಾಹಿತ್ಯಿಕ ಪರಿಕಲ್ಪನೆ ಅರಿವು ಮೂಡಿಸಲು ರಜಾ ಸಮಯದಲ್ಲಿ ಬೇಸಿಗೆ ಶಿಬಿರ ಸೂಕ್ತ, ಇದರಿಂದಾಗಿ ಮಕ್ಕಳಲ್ಲಿ ಸಾಮಾಜಿಕ ಕಾಳಜಿ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೆಲವು ಪೋಷಕರು ಕೇವಲ ನಕಾರಾತ್ಮಕ ಸಂದೇಶಗಳ ಟಿವಿ ಧಾರಾವಾಹಿಗಳಲ್ಲಿ ತಲ್ಲೀನರಾಗುವ ಬದಲು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಲ್ಡನ್ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಕುಸುಮ ಶಿವಕುಮಾರ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಿ ಅವರನ್ನು ಎಲ್ಲಾ ಆಯಾಮಗಳಲ್ಲಿ ಬೆಳೆಸುವ ಸದುದ್ಧೇಶ ಈ ಶಿಬಿರ. ಮಕ್ಕಳು ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಬದ್ಧತೆ, ಸಾಮಾಜಿಕ ಕಾಳಜಿಗಳೊಂದಿಗೆ ಅಳವಡಿಸಿಕೊಂಡಾಗ ಅವರ ಮುಂದಿನ ಸಾಧನೆಗೆ ಪೂರಕವಾಗುತ್ತದೆ ಎಂದರು. 

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಡಿಸಿಎಂ ಶಾಖೆ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ, ಹಿರಿಯ ಚಿತ್ರ ಕಲಾವಿದ ಚಂದ್ರಶೇಖರ್ ಎಸ್. ಸಂಗ, ಡಿಸಿಎಂ ಟೌನ್‍ಶಿಪ್‍ನ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಶಿವನಪ್ಪ ಮಾತನಾಡಿದರು. 

ಕು. ಮಾನಸ – ಕು. ಶಾಲಿನಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಶಿಕ್ಷಣ ಸಮಿತಿ ಸಂಘಟನೆ ಕಾರ್ಯದರ್ಶಿ ಎಂ.ಎನ್.ಮೃತ್ಯುಂಜಯ ಸ್ವಾಗತಿಸಿದರು. ಪ್ರಸ್ತಾವನೆಯಾಗಿ ಮಾತನಾಡಿದ ಶ್ರೀಮತಿ ಸುಮಾ ಏಕಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಕಲಾಕುಂಚದ ಸಕ್ರಿಯ ಸದಸ್ಯರಾದ ನಾರಪ್ಪ ಬಣಕಾರ ವಂದಿಸಿದರು.

error: Content is protected !!