ಪಿಯುಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಗೆ 20 ಜನ ಸಿಬ್ಬಂದಿ! ವೈಫಲ್ಯ ಯಾರದು?

ಮಾನ್ಯರೇ,

ಹಿಂದೆಲ್ಲಾ 10ನೇ ತರಗತಿಯವರೆಗೂ ಒಬ್ಬ ಶಿಕ್ಷಕ ಎಂಬಂತೆ ಏಕ ಶಿಕ್ಷಕರ ಶಿಕ್ಷಣ ಬೋಧನೆ ಸಮಯ ನೋಡಿದ್ದೆವು. ಆಗೆಲ್ಲಾ ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು. ಅದರಂತೆ ಆರ್ಥಿಕ ವ್ಯವಸ್ಥೆಯೂ ಸಹ ಅಷ್ಟಾಗಿ ಸುಸ್ಥಿತಿಯಲ್ಲಿ ಇರಲಿಲ್ಲ.

ಈಗ ವಿದ್ಯಾವಂತರು, ಪದವೀಧರರು ಸಾಕಷ್ಟು ಜನ ಇದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಅನೇಕ ಖಾಲಿ ಹುದ್ದೆಗಳಿವೆ. ಇವುಗಳ ಭರ್ತಿ ಕಾರ್ಯ ಆಗುತ್ತಿಲ್ಲ ಎಂತಾದರೆ, ನಮ್ಮ ಶಿಕ್ಷಣ ವ್ಯವಸ್ಥೆ ಇನ್ನು ದುಸ್ಥಿತಿ ಹಾಗೂ ಆರ್ಥಿಕ ದುರ್ಬಲತೆ ಎದುರಿಸುತ್ತಿದೆ ಎಂಬ ಅರ್ಥ ಕೊಡುತ್ತದೆ. 

ಮೊನ್ನೆ ನಡೆಸಲಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಗೆ 20 ಜನ ಸಿಬ್ಬಂದಿ ಕಾರ್ಯ ಎಂಬ ವಿಷಯ ಆರ್ಥಿಕತೆಯಲ್ಲಿ ಎಷ್ಟು ಸಬಲರಾಗಿದ್ದೇವೆ ಎಂಬುದನ್ನು ತೋರಿಸಿಕೊಡುವ ಪ್ರಯತ್ನವೇ ಇದು? 

ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಸಂಪರ್ಕ ಅಥವಾ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಹೆಚ್ಚಿನ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವ ಪರೀಕ್ಷಾ ಕೇಂದ್ರಗಳಿಗೆ ಒಬ್ಬ ವಿದ್ಯಾರ್ಥಿಯನ್ನು ಕಳುಹಿಸಿ ಪರೀಕ್ಷೆ ಬರೆಸಲು ಸಾಧ್ಯವಾಗುತ್ತಿರಲಿಲ್ಲವೇ?

ಅಲ್ಲೇ ಬರೆಸಬೇಕೆಂಬ ನಿಯಮವಿದ್ದರೆ ಒಬ್ಬ ವಿದ್ಯಾರ್ಥಿಗೆ 20 ಜನ ಸಿಬ್ಬಂದಿ ಕಾರ್ಯನಿರ್ವಹಣೆ ಎಂಬ ಹೇಳಿಕೆ ಕೊಡುವ ಅವಶ್ಯಕತೆ ಏನಿತ್ತು? ಮುಂದೆ ಇಂತಹ ಅನಿರೀಕ್ಷಿತ ಸಂದರ್ಭದಲ್ಲಿ ಪೂರಕ ಬದಲಾವಣೆಗಳನ್ನು ಆಡಳಿತದೊಡನೆ ಚರ್ಚಿಸಿ, ಸಾಧ್ಯವಿದ್ದರೆ ಬದಲಾವಣೆಯೊಂದಿಗೆ ಕಾರ್ಯ ನಿರ್ವಹಿಸುವುದು ಒಳಿತು.

-ಕೆ. ಸಿರಾಜ್ ಅಹಮ್ಮದ್,  ಸಂತೇಬೆನ್ನೂರು

error: Content is protected !!