ಮಾನ್ಯರೇ,
ವಿವಾಹಿತ ಮಹಿಳೆಯರು ಯಾವುದೋ ವೈಯುಕ್ತಿಕ ದ್ವೇಷಕ್ಕಾಗಿ,ತಮ್ಮ ಪತಿ ಮತ್ತವರ ಕುಟುಂಬದ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ದಾಖಲಾತಿ ಪ್ರಕರಣಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ. ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಪ್ರಕರಣವೇ ಇದಕ್ಕೆ ತಾಜಾ ಉದಾಹರಣೆ.
ತಂತ್ರಜ್ಞಾನಗಳು ಮುಂದುವರೆದಂತೆ ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ದುರ್ಬಳಕೆ ಯಾಗುತ್ತಿದ್ದು, ಏನೂ ಮಾಡದ ತಪ್ಪಿಗೆ ಇಡೀ ಕುಟುಂಬವೇ ಕೋರ್ಟು, ಕಚೇರಿ, ಪೊಲೀಸ್ ಸ್ಟೇಷನ್ ಎನ್ನುತ್ತಾ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಪರಿಣಾಮ ಪುರುಷರ ಮಾನಸಿಕ ಧೈರ್ಯವನ್ನೇ ಕುಗ್ಗಿಸಿ, ಮರ್ಯಾದೆಗೆ ಅಂಜಿ, ಕೊನೆಗೆ ಏನು ಮಾಡಲಾಗದ ಸ್ಥಿತಿಯಲ್ಲಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ದುರ್ಬಳಕೆ ಪ್ರಕರಣಗಳು ಹೆಮ್ಮರವಾಗಿ ಬೆಳೆಯುವ ಮೊದಲೇ, ಸಾಧಕ ಬಾದಕಗಳನ್ನು ಪರಿಶೀಲಿಸಿ,ಕಾನೂನಿಗೆ ಸೂಕ್ತ ರೀತಿಯ ತಿದ್ದುಪಡಿಯ ಮೂಲಕ ದುರ್ಬಳಕೆ ಆಗುವುದನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಬೇಕಾಗಿದೆ. ಈ ಮೂಲಕ ಪುರುಷರ ಹಿತಾಸಕ್ತಿಯನ್ನು ಕಾಪಾಡುವ ಹೊಣೆ ಹೊರಬೇಕಾಗಿದೆ.
– ಮುರುಗೇಶ ಡಿ., ದಾವಣಗೆರೆ.