ರಾಣೇಬೆನ್ನೂರು : ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಎಚ್ಚರಿಕೆ
ರಾಣೇಬೆನ್ನೂರು, ಮೇ 29- ಬೆಳೆವಿಮೆ ಸೇರಿದಂತೆ ಸಂಧ್ಯಾ ಸುರಕ್ಷ, ವಿಧವಾ ವೇತನ, ಉದ್ಯೋಗ ಖಾತ್ರಿ ಸೇರಿದಂತೆ ಸರಕಾರದ ವಿವಿಧ ಯೋಜನೆಯ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಂಡು ‘ಲಾಕ್’ ಮಾಡಿಕೊಂಡಿರುವುದು ಸಾಬೀತಾಗಿದೆ. ಕೂಡಲೇ ನಾಳೆಯಿಂದಲೇ ಮರಳಿ ರೈತರ ಖಾತೆಗೆ ಜಮಾ ಮಾಡಬೇಕು ಇಲ್ಲದಿದ್ದರೆ ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಎಚ್ಚರಿಕೆ ನೀಡಿದರು.
ಅವರು ಇಂದು ಮಾಕನೂರಿನ ಯೂನಿಯನ್ ಬ್ಯಾಂಕ್ನವರು ರೈತರ ಹೆಸರಿಗೆ ಮಂಜೂರಾಗಿದ್ದ ವಿವಿಧ ಯೋಜನೆಯ ಹಣವನ್ನು ಸಾಲದ ಖಾತೆಗೆ ಜಮಾಮಾಡಿಕೊಂಡಿದ್ದ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘಟನೆಯ ಮುಖಂಡರಾದ ರವೀಂದ್ರಗೌಡ
ಎಫ್. ಪಾಟೀಲ ಮತ್ತು ಈರಣ್ಣ ಹಲಗೇರಿ ನೇತೃತ್ವದಲ್ಲಿ ನಾಳೆ ಹೆದ್ದಾರಿ ತಡೆ ಕಾರ್ಯಕ್ರಮವನ್ನು
ಹಮ್ಮಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಪ್ರತಿಭಟನೆಯ ಮುನ್ನಾ ದಿನವೆ ಮಾಕನೂರಿಗೆ ಬಂದು ರೈತರು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಿ ಬ್ಯಾಂಕ್ನವರಿಂದ ಆದ ತಪ್ಪನ್ನು ಸರಿಪಡಿಸಿ ನೊಂದ ರೈತರಿಗೆ ನ್ಯಾಯಯುತವಾಗಿ ಬರಬೇಕಾಗಿದ್ದ ಸರಕಾರದ ವಿವಿಧ ಯೋಜನೆಯ ಹಣವನ್ನು ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ಮುಂದೆಂದೂ ಇಂಥ ಪ್ರಮಾದ ಆಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ನೇತೃತ್ವ ವಹಿಸಿ ಮಾತನಾಡಿದ ರವೀಂದ್ರಗೌಡ ಎಫ್. ಪಾಟೀಲ, ರೈತರು ಸುಳ್ಳು ಹೇಳಿ ಬದುಕುವವರಲ್ಲ, ಸ್ವಾಭಿಮಾನಿಗಳು ಅವರಿಗೆ ಕೆಲವು ಅಧಿಕಾರಿಗಳಿಂದ ಯೋಜನೆಗಳ ಉಪಯೋಗ ಸಿಗುತ್ತಿಲ್ಲ ಅನ್ನದಾತನ ಬಗ್ಗೆ ಇಂಥ ನಿರ್ಲಕ್ಷ ಸಲ್ಲದು ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ ನಮ್ಮ ಮುಂದಿನ ಹೋರಾಟ 2 ನೇ ಹಂತದ ‘ಓಟಿಎಸ್’ ಯೋಜನೆಯ ಕಡೆ, ‘ಓಟಿಎಸ್’ ಯೋಜನೆ ಸಾವಿರಾರು ಅರ್ಹ ರೈತರಿಗೆ ತಲುಪದೆ ಇರಲು ಬ್ಯಾಂಕ್ ಅಧಿಕಾರಿಗಳ ರೈತ ವಿರೋಧಿ ನೀತಿಯೇ ಕಾರಣವಾಗಿದೆ ಎಂದರು.