ಪರಮೇಶ್ವರ ನಾಯ್ಕಗೆ ಸಚಿವ ಸ್ಥಾನ ನೀಡಲು ಆಗ್ರಹ

ಪರಮೇಶ್ವರ ನಾಯ್ಕಗೆ ಸಚಿವ ಸ್ಥಾನ ನೀಡಲು ಆಗ್ರಹ

ಹರಪನಹಳ್ಳಿ, ಮೇ 29- ಮಾಜಿ ಶಾಸಕ  ಪಿ.ಟಿ ಪರಮೇಶ್ವರ ನಾಯ್ಕ  ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ  ಸಚಿವ ಸ್ಥಾನ  ನೀಡುವಂತೆ ಬಂಜಾರ್ ಸಮುದಾಯ ಆಗ್ರಹ ಮಾಡಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಈ ಬಾರಿ ಲಂಬಾಣಿ ಸಮಾಜವು ರಾಜ್ಯದಲ್ಲಿ ಶೇ.85 ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಬಂಜಾರ್ ಸಮುದಾಯದ ಶಾಸಕರಿಗೆ  ಸಚಿವ ಸ್ಥಾನ ನೀಡಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದರು.

ಟಿಎಪಿಎಂಎಸ್ ಮಾಜಿ ಅಧ್ಯಕ್ಷ ತಿಮ್ಮನಾಯ್ಕ ಮಾತನಾಡಿ,  ಬಂಜಾರ್ ಸಮಾಜ ಇನ್ನೂ ಹಿಂದುಳಿದಿದೆ. ಸಾಕಷ್ಟು  ಜಮೀನು, ಉದ್ಯೋಗ ಅವಕಾಶ ಇಲ್ಲದ ಕಾರಣ ಉದ್ಯೋಗ ಅರಸಿಕೊಂಡು ಈಗಲೂ ಗೋವಾ, ಮಂಗಳೂರು  ಕಾಫಿ ತೋಟದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಅದೇ ದುಡಿಮೆಯಿಂದ ಅವರ ಕುಟುಂಬಗಳು ಜೀವಿಸುತ್ತಿವೆ. ಶಾಶ್ವತ ಯೋಜನೆಗಳಿಂದ ಸಮಾಜ ವಂಚಿತಗೊಂಡಿದೆ. ಸಮಾಜದ ಬಗ್ಗೆ ಹೊಸ ಯೋಜನೆ ಹಾಕಿಕೊಳ್ಳಲು ಸರ್ಕಾರದಲ್ಲಿ ಸಮಾಜದವರಿಗೆ ಸಚಿವ ಸ್ಥಾನ ನೀಡಿದರೆ   ಕಾಳಜಿ ವಹಿಸುತ್ತಾರೆ ಎಂದರು. 

ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಎಲ್. ಬಿ. ಹಾಲೇಶ್ ನಾಯ್ಕ ಮಾತನಾಡಿ,   ಲಂಬಾಣಿ ಸಮಾಜದ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ,  ವಿಧಾನಪರಿಷತ್ ಸದಸ್ಯ  ಪ್ರಕಾಶ್ ರಾಠೋಡ್, ಹೂವಿನ ಹಡಗಲಿ ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕರವರನ್ನು ಪರಿಷತ್ತಿಗೆ ಆಯ್ಕೆ ಮಾಡಿ  ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ವೇದುನಾಯ್ಕ ಮಾತನಾಡಿ, ಬಂಜಾರ್ ಸಮುದಾಯದ ಅನೇಕ ತಾಂಡಾಗಳು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಇವು ಕಂದಾಯ ಗ್ರಾಮಗಳಾಗಲು ಸಮಾಜದ  ಶಾಸಕರಿಗೆ  ಸರ್ಕಾರದಲ್ಲಿ ಮಂತ್ರಿ ಸ್ಥಾನ ಹೊಂದಿದರೆ ಉಪಯುಕ್ತವಾಗುತ್ತದೆ. ಹೀಗಾಗಿ ಬಂಜಾರ ಸಮಾಜಕ್ಕೆ  ನ್ಯಾಯ ಒದಗಿಸಿದಂತಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಶಿವಣ್ಣನಾಯ್ಕ,  ತಾವರಾನಾಯ್ಕ, ಭೀಮಾನಾಯ್ಕ, ಮಹಾಂತೇಶ್ ನಾಯ್ಕ, ನೇಮ್ಯಾನಾಯ್ಕ, ಕುಮಾರ್ ನಾಯ್ಕ ಮತ್ತಿತರರು ಇದ್ದರು.

error: Content is protected !!