ಜಗಳೂರು : ನಿರಾಶ್ರಿತರಿಗೆ ಸೂರು ಕಲ್ಪಿಸಲು ಜಮೀನು ಮಂಜೂರು

ಜಗಳೂರು : ನಿರಾಶ್ರಿತರಿಗೆ ಸೂರು ಕಲ್ಪಿಸಲು ಜಮೀನು ಮಂಜೂರು

ಜಗಳೂರು, ನ.15- ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆ ಅಂಗಳದಲ್ಲಿ ಸೂರು ಕಳೆದುಕೊಂಡ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶಕ್ಕಾಗಿ ಕಂದಾಯ ಇಲಾಖೆ ವ್ಯಾಪ್ತಿಯ ಸರ್ವೆ ನಂ.89ರಲ್ಲಿ 2 ಎಕರೆ  ಸರ್ಕಾರಿ ಜಮೀನು ಮೀಸಲಿರಿಸಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಶುಕ್ರವಾರ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಆದೇಶ ಪತ್ರ ಹಸ್ತಾಂತರಿಸಿ ಮಾತನಾಡಿದ ಶಾಸಕರು, ಹಿರೇಮಲ್ಲನಹೊಳೆ ಕೆರೆ ಅಂಗಳದಲ್ಲಿ ಕಳೆದ ದಶಕಗಳಿಂದ ಗ್ರಾಮದ ವಸತಿ ರಹಿತ ಬಡ ಕೂಲಿ ಕಾರ್ಮಿಕರು ಕೆರೆ ಅಂಗಳದಲ್ಲಿ ತಮ್ಮ ಅವಶ್ಯಕತೆಗಾಗಿ ಸೂರು ನಿರ್ಮಿಸಿಕೊಂಡಿದ್ದರು ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಠಿಯಿಂದ ಕೆರೆ ಕೋಡಿ ಬಿದ್ದ ಹಿನ್ನೆಲೆ ಪ್ರಕೃತಿ ವಿಕೋಪಕ್ಕೆ 35 ಕುಟುಂಬಗಳು ಬೀದಿಗೆ ಬಿದ್ದಿವೆ. ಹಸುಳೆ ಕಂದಮ್ಮ ನೀರಿನಲ್ಲಿ ಮುಳುಗಿ ಬಲಿಯಾಗಿರುವುದು ದುಃಖ ತಂದಿದ್ದು, ಕಳೆದ ಒಂದೂವರೆ ತಿಂಗಳಿನಿಂದ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡರು ಜಿಲ್ಲಾಡಳಿತ ಸಮೇತ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ನೀಡಿದ ಶಾಶ್ವತ ಸೂರಿನ ಭರವಸೆಯಂತೆ ಇದೀಗ ಸರ್ಕಾರಿ ಜಮೀನು ಮೀಸಲಿರಿಸಲಾಗಿದೆ ಎಂದು ಹೇಳಿದರು.

ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಪ್ರಥಮ ಆದ್ಯತೆ ನೀಡಿ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಕಳೆದ ಆಡಳಿತಾವಧಿಯಲ್ಲಿನ ತಾಲ್ಲೂಕು ಆಡಳಿತವಾಗಲಿ, ಆಡಳಿತದಲ್ಲಿದ್ದ ಜನ ಪ್ರತಿನಿಧಿಗಳಾಗಲಿ ಕೆರೆ ಅಂಗಳದಲ್ಲಿ ವಾಸಿಸುತ್ತಿದ್ದ ವಸತಿ ರಹಿತರಿಗೆ ಸರ್ಕಾರಿ ಜಮೀನು ಗುರುತಿಸಿ ವಸತಿ ಯೋಜನೆಯಡಿ ಸೂರು ಕಲ್ಪಿಸಿ, ಸ್ಥಳಾಂತರಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ದೂರಿದರು.

ತಹಶೀಲ್ದಾರ್ ಸೈಯದ್ ಕಲೀ‌ಂ ಉಲ್ಲಾ ಮಾತನಾಡಿ, 2 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ ನಿರಾಶ್ರಿತರ ನಿವೇಶನಕ್ಕೆ ನ.11 ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶಾಸಕರ ಹಾಗೂ ಜಿಲ್ಲಾಡಳಿತದ ಕಾಳಜಿಯಿಂದ ಒಂದೇ ದಿನದಲ್ಲಿ ಆದೇಶ ಮಂಜೂರಾತಿ ಪತ್ರ ಸಿಕ್ಕಿದೆ ಎಂದು ಹೇಳಿದರು. ಇಂದು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಆರ್‌ಟಿಸಿ ಹಸ್ತಾಂತರಗೊಳಿಸಲಾಗಿದೆ. ವಸತಿ ಯೋಜನೆಯಡಿ ಶೀಘ್ರವೇ ವಸತಿಗಾಗಿ ಮನೆ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಗ್ರಾ.ಪಂ‌ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಬಿ.ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಮಂಜುನಾಥ್, ಮಾರುತಿ, ಗಿಡ್ಡನಕಟ್ಟೆ ಕಾಂತರಾಜ್ ಮತ್ತಿತರರಿದ್ದರು.

error: Content is protected !!