ಜಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಜಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಜಗಳೂರು, ನ. 3- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ  ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಸೈಯ್ಯದ್ ಕಲೀಮುಲ್ಲಾ ಅವರಿಗೆ  ಮನವಿ ಸಲ್ಲಿಸಿದರು.

ಎಐಟಿಯುಸಿ ಗೌರವ ಅಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ, ಕಳೆದ ವರ್ಷ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲವಾರು ರೀತಿಯ ಕಿಟ್, ಲ್ಯಾಪ್ ಟಾಪ್, ಟ್ಯಾಬ್, ಶಾಲಾ ಕಿಟ್, ಆರೋಗ್ಯ ತಪಾಸಣೆ, ಇತರೆ ತರಬೇತಿ ಹೆಸರಿನಲ್ಲಿ ಕಾರ್ಮಿಕರು ದುಡಿದ ಹಣದ ಸೆಸ್ ಹಣವನ್ನು ಆಡಳಿತ ಬಿಜೆಪಿ ಸರ್ಕಾರ  ಸಾಕಷ್ಟು ದುಂದು ವೆಚ್ಚ ಮಾಡಿದೆ ಎಂದು ಆರೋಪಿಸಿದರು.

ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು. ಬೋಗಸ್ ಕಾರ್ಡ್ ತಡೆಯಲು ಕ್ರಮ  ಕೈಗೊಳ್ಳಬೇಕು. ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕ ಸಂಘಟನೆ ಎಐಟಿಯುಸಿಗೆ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಪ್ರಧಾನ‌ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ, ಬಾಕಿ ಇರುವ ಸುಮಾರು 14 ಲಕ್ಷ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು  ಕೂಡಲೇ ವಿಲೇವಾರಿ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ  ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ವೀರಣ್ಣ, ಪ್ರಧಾನ ಕಾರ್ಯದರ್ಶಿ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ, ಮುಖಂಡರಾದ ಯೋಗೇಶ್, ದೇವಿಕೆರೆ ಮಧು, ಬಸವರಾಜ್, ಶಿವಮೂರ್ತಿ, ಪಂಪಾಪತಿ, ಗುರು, ಶೇಖರಪ್ಪ, ಅಜ್ಜಪ್ಪ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!