ಇಂದು ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಮುಳ್ಳೋತ್ಸವ, ಕಾರಣಿಕ, ನಾಳೆ ಓಕುಳಿ
ಹೊನ್ನಾಳಿ,ಏ.4- ತಾಲ್ಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ನೆರವೇರಿತು.
ಶ್ರೀ ಆಂಜನೇಯ ಸ್ವಾಮಿಯ ಕೋರೂಟದ ಬಳಿಕ ನಿನ್ನೆ ಮಧ್ಯರಾತ್ರಿಯಿಂದ ಇಂದು ಮುಂಜಾನೆಯವರೆಗೆ ಗಜೋತ್ಸವ ಜರುಗಿತು. ಬಳಿಕ ಮಧ್ಯಾಹ್ನ 12.22ಕ್ಕೆ ವೈಭವದ ರಥೋತ್ಸವ ಡೊಳ್ಳು, ಭಜನೆ, ತಮಟೆ, ಕಹಳೆ, ಜಾಗಟೆ, ಚಕ್ರವಾದ್ಯ, ಸಮಾಳ ಮೇಳಗಳ ಅದ್ಧೂರಿ ಮಂಗಳಕರ ನಿನಾದದ ಮಧ್ಯೆ ಸನಾತನ ಪದ್ಧತಿಯಂತೆ ಬ್ರಹ್ಮ ರಥಾರೋಹಣ ಹಾಗೂ ಉತ್ಸವಗಳು ವೈಭವದಿಂದ ನಡೆದವು.
ಭಕ್ತರು ತೇರಿಗೆ ಬಾಳೆಹಣ್ಣು, ಮೆಣಸಿನಕಾಳು, ಮಂಡಕ್ಕಿ ಮತ್ತಿತರೆ ವಸ್ತುಗಳನ್ನು ಸಮರ್ಪಿಸುತ್ತಿದ್ದ ದೃಶ್ಯ ಕಂಡುಬಂತು. ರಥ ಮುಂದಕ್ಕೆ ಚಲಿಸಿದ ನಂತರ ಭಕ್ತರು ತೇರಿಗೆ ಸಮರ್ಪಿಸಿದ ಮೆಣಸಿನಕಾಳುಗಳನ್ನು ಆಯ್ದುಕೊಳ್ಳುತ್ತಿದ್ದರು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತಿತರೆ ಜಿಲ್ಲೆ ಗಳು ಸೇರಿದಂತೆ, ರಾಜ್ಯದ ವಿವಿಧ ಭಾಗಗ ಳಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ, ಕಾಣಿಕೆ ಸಮರ್ಪಿಸಿದರು.
ನಾಳೆ ಶುಕ್ರವಾರ ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಶ್ರೀ ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ಹಾಗೂ ಕಾರಣಿಕ ಮಹೋತ್ಸವ ನಡೆಯಲಿದೆ. ದೇವಾಲಯದ ಪಕ್ಕದ ಅಗಸೆ ಬಾಗಿಲಿಗೆ ಹೊಂದಿಕೊಂಡಂತೆ ಎತ್ತರದ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆರಂಭದಲ್ಲಿ ದಾಸಪ್ಪನವರು ಮುಳ್ಳುಗದ್ದುಗೆ ಏರುವ ಮೂಲಕ ವಿಧ್ಯುಕ್ತವಾಗಿ ಈ ಕಾರ್ಯಕ್ರಮ ಪ್ರಾರಂಭವಾಗುತ್ತದೆ.
ಬಡವ-ಬಲ್ಲಿದ, ಜಾತಿ-ಮತ ಭೇದವಿಲ್ಲದೆ ಹರಕೆ ಹೊತ್ತ ಸಮಸ್ತ ಭಕ್ತಾದಿಗಳು ಸಾಮೂಹಿಕವಾಗಿ ಗದ್ದುಗೆ ಏರಿ ಮುಳ್ಳು ತುಳಿಯುವ ದೃಶ್ಯ ಭಯಾನಕವಾಗಿದ್ದರೂ ಭಕ್ತಿಯ ಪರಾಕಾಷ್ಟೆಯಿಂದ ಇವೆಲ್ಲವೂ ಗೌಣವಾಗುತ್ತವೆ. ನಂತರ ಧಾರ್ಮಿಕ ವಿಧಿ-ವಿಧಾನದಿಂದ ದೇವರ ಪಲ್ಲಕ್ಕಿ ಏರಿದ ನಂತರ ಕಾರಣಿಕ ನುಡಿಯುವ ದಾಸಪ್ಪನವರ ದೇವವಾಣಿ ಮೊಳಗುತ್ತದೆ.
ನಾಡಿದ್ದು ದಿನಾಂಕ 6ರ ಶನಿವಾರ ಬೆಳಿಗ್ಗೆ 10.30ಕ್ಕೆ ಓಕುಳಿ ಮಹೋತ್ಸವ, ರಾತ್ರಿ 8ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಜವಳ, ಬಾಯಿ ಬೀಗ, ಮುದ್ರಾಧಾರಣೆ ಮುಂತಾದ ಭಕ್ತರ ಹರಕೆ-ಸೇವೆಗಳು ನಡೆಯುತ್ತವೆ.
ಉಪ ತಹಸೀಲ್ದಾರ್ ಮಂಜುನಾಥ್ ಕೆ.ಇಂಗಳಗೊಂದಿ, ಪ್ರಭಾರ ರಾಜಸ್ವ ನಿರೀಕ್ಷಕ ಬಸವರಾಜ ಜವಳಿ, ಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಜೆಬಿಎಚ್ ಪ್ರಭಾಕರಮೂರ್ತಿ, ಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಕೆ. ಶೇಖರಪ್ಪ, ಕಾರ್ಯದರ್ಶಿ ಎಸ್.ಎಂ. ಜಗದೀಶ್, ಪ್ರಧಾನ ಅರ್ಚಕ ಕೆ.ಎಸ್. ಶ್ರೀನಿವಾಸ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಜಿ. ಶಿವಕುಮಾರ್, ಕೆ.ಜಿ. ಗುರುರಾಜ್ ಪಟೇಲ್, ಕುಂದೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್. ಧನಂಜಯ್, ರಹಮತ್ ಉಲ್ಲಾ ಖಾನ್, ತಾಪಂ ಮಾಜಿ ಅಧ್ಯಕ್ಷ ತಿಪ್ಪೇಶಪ್ಪ, ಕುಂದೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಕರಿಬಸಪ್ಪ, ಉಪಾಧ್ಯಕ್ಷ ಚಿದಾನಂದಮೂರ್ತಿ, ಸದಸ್ಯರಾದ ಎಸ್.ಆರ್. ಪ್ರಸನ್ನಕುಮಾರ್, ರೇಖಾ ಎನ್.ಜಿ. ರೇವಣಸಿದ್ಧಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.