ಅಧ್ಯಯನ ಪ್ರವಾಸದಲ್ಲಿ ರೇಣುಕಾಚಾರ್ಯರ ಕೈಬಿಟ್ಟಿದ್ದೀರಲ್ಲಾ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರವಾಸಕ್ಕೆ ಬರುವ ರಾಜ್ಯ ನಾಯಕರೇ ಉತ್ತರಿಸಲಿದ್ದಾರೆ : ಎ.ಬಿ. ಹನುಮಂತಪ್ಪ
ಹೊನ್ನಾಳಿ, ನ. 5 – ವಿಧಾನಸಭಾ ಮಾಜಿ ಸಭಾಪತಿ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬರ ಅಧ್ಯಯನ ತಂಡ ನಾಳೆ ದಿನಾಂಕ 6ರ ಸೋಮವಾರ ಹೊನ್ನಾಳಿ ತಾಲ್ಲೂಕಿಗೆ ಆಗಮಿಸಲಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಕ್ಷದ ಉಸ್ತುವಾರಿ ಶಾಂತರಾಜ್ ಪಾಟೀಲ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಬರ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ವರದಿ ಸಲ್ಲಿಸುವ ಉದ್ದೇಶದಿಂದ ಬರ ಅಧ್ಯಯನ ನಡೆಸಲು ರಾಜ್ಯ ಬಿಜೆಪಿ ಘಟಕ 12 ತಂಡಗಳನ್ನು ರಚನೆ ಮಾಡಿದೆ, ಅದರಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ತಂಡವೂ ಒಂದು. ಈ ತಂಡದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಚಿತ್ರದುರ್ಗ ಜಿಲ್ಲೆಯ ಶಾಸಕ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಮೋರ್ಚಾಗಳ ಮುಖಂಡರುಗಳು ಇರುತ್ತಾರೆ ಎಂದರು.
ಬರ ಅಧ್ಯಾಯನ ತಂಡ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಸಮೀಪ ಇರುವ ಜಮೀನುಗಳಿಗೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಲಿದ್ದಾರೆ. ಈ ಸಮಯದಲ್ಲಿ ರೈತರು ಖುದ್ದು ತಂಡವನ್ನು ಭೇಟಿ ಮಾಡಿ ತಮಗೆ ಆಗಿರುವ ನಷ್ಟದ ಬಗ್ಗೆ ತಿಳಿಸಬಹುದು ಎಂದು ತಿಳಿಸಿದರು.
ಬರ ಅಧ್ಯಯನ ತಂಡದಲ್ಲಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೆಸರು ಕೈಬಿಟ್ಟಿದ್ದಾರಲ್ಲ? ಎಂಬ ಪ್ರಶ್ನೆಗೆ, ಸೋಮವಾರ ನಮ್ಮ ಮುಖಂಡರೇ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದು ಅಸಂಘಟಿತ ಪ್ರಕೋಷ್ಟದ ರಾಜ್ಯ ಸಂಚಾಲಕ ಎ.ಬಿ.ಹನುಮಂತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನ್ಯಾಮತಿಯ ಸಿ.ಕೆ.ರವಿಕುಮಾರ್, ನಟರಾಜ, ನೆಲಹೊನ್ನೆ ದೇವರಾಜು, ಮೆಸ್ಕಾಂ ಮಾಜಿ ನಿರ್ದೇಶಕ , ಬಿಜೆಪಿ ಮುಖಂಡ ರುದ್ರೇಶ್, ಸಾಸ್ವೇಹಳ್ಳಿಯ ನರಸಿಂಹ ಹಾಗೂ ಇತರರು ಇದ್ದರು.