ಹೊನ್ನಾಳಿ, ಅ. 27- ಗ್ರಾಮಸ್ಥರ ಸಮಸ್ಯೆ ಆಲಿಸಿ, ಪರಿಹಾರ ನೀಡುವ, ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮತ್ತು ಜನ ಜಾಗೃತಿ ಮೂಡಿಸುವ ಜನತಾ ದರ್ಶನ ಕಾರ್ಯಕ್ರಮ ಅರ್ಥಪೂರ್ಣ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ ತಾಲೂಕು ಆಡಳಿತ ಮತ್ತು ನ್ಯಾಮತಿ ತಾಲ್ಲೂಕು ಪಂಚಾಯ್ತಿ ಮತ್ತು ಗೋವಿನಕೋವಿ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,
ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಗಳ ಮನೆ ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮ ಇದಾಗಿದೆ ಎಂದರು.
`ಅಧಿಕಾರಿಗಳ ನಡೆ ಜನಸಾಮಾನ್ಯರ ಕಡೆ’ ಎನ್ನುವಂತೆ ಸ್ಥಳದಲ್ಲೇ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಕಛೇರಿಯಿಂದ ಕಚೇರಿಗೆ ಅಲೆದಾಡಲು ಆಗದಿರುವ ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆದರೆ ಸರ್ಕಾರದ ಈ ಯೋಜನೆ ಯಶಸ್ಸು ಕಾಣಲು ಸಾಧ್ಯ ಎಂದರು.
ಈ ಸ್ವತ್ತು, ಪೋಡಿ, ರಸ್ತೆ ಒತ್ತುವರಿ, ಪಿಂಚಣಿ, ಆಧಾರ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ಯೋಜನೆಗಳ ಅರಿವಿನೊಂದಿಗೆ ಜಾಗೃತಿ ಮೂಡಿಸುವಂತಾಗಬೇಕಿದೆ ಎಂದು ತಿಳಿಸಿದರು.
ಗೋವಿನಕೋವಿ ಬಹುಗ್ರಾಮ ಕುಡಿಯುವ ನೀರಿನ ಸ್ಥಳ ಸಮಸ್ಯೆಗೆ 4 ಎಕರೆ ಮಂಜೂರು ಮಾಡಿ ಹಸ್ತಾಂತರ ಮಾಡುವ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 19 ಕಂದಾಯ ಇಲಾಖೆ 10 ತಾಲ್ಲೂಕು ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಯ 50 ಅರ್ಜಿಗಳು ಇಂದು ಸಲ್ಲಿಕೆಯಾಗಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅರ್ಜಿಗಳ ಪರಿಹಾರಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ರೈತರ ಜಮೀನುಗಳಿಗೆ ನಕಾಶೆಯಲ್ಲಿದ್ದ ಕಾಲು ದಾರಿ, ಬಂಡಿ ದಾರಿ ಇಸ್ಕೆಚ್‍ನಲ್ಲಿದ್ದರೆ ಅಂತ ಜಮೀನುಗಳಿಗೆ ರಸ್ತೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದರು. ಸ್ವತ್ತಿನ ಸಮಸ್ಯೆ ಇರುವಂತಹ ಕುರುವ, ಬೀರಗೊಂಡನಹಳ್ಳಿ, ಗೋವಿನಕೋವಿ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದು, ಯಕ್ಕನಹಳ್ಳಿ ಗ್ರಾಮದಲ್ಲಿ ಮುಂದಿನ ಸಭೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮಳಲಿ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಲ್ಲಿ ಉಂಟಾಗಿರುವ ಸ್ವತ್ತು ಸಮಸ್ಯೆ ದೊಡ್ಡದಾಗಿದ್ದು, ಸಮರೋಪಾದಿಯಲ್ಲಿ ಸಮಸ್ಯೆ ಇತ್ಯರ್ಥಗೊಳ್ಳಬೇಕಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಯೋಜನೆಯ 3, ನಿರ್ಗತಿಕ ವಿಧವಾ ವೇತನ 6, ಅಂಗವಿಕಲರ ಘೋಷಣಾ ವೇತನ 7, ಇಂದಿರಾ ಗಾಂಧಿ ವೃದ್ಧಾಪ ವೇತನ 2, ಸುಕನ್ಯಾ ಸಮೃದ್ದಿ ಯೋಜನೆ ಸೌಲಭ್ಯ 5, ಪೋಷಣ್ ಅಭಿಯಾನದಡಿಯಲ್ಲಿ ಸೌಲಭ್ಯ ಪಡೆಯುವ ಗರ್ಭಿಯಣಿಯರಿಗೆ 10, ಫಲಾನುಭವಿಗಳಿಗೆ ಸೌಲಭ್ಯ ಪಡೆಯುವ ಆದೇಶ ಪತ್ರ ನೀಡಲಾಯಿತು.
ನ್ಯಾಮತಿ ತಹಶೀಲ್ದಾರ್ ಗೋವಿಂದಪ್ಪ ಸ್ವಾಗತಿಸಿದರು, ತಾಲ್ಲೂಕು ಪಂಚಾಯ್ತಿ ಇಓ ರಾಘವೇಂದ್ರ, ಗ್ರಾ.ಪಂ. ಅಧ್ಯಕ್ಷ ದಾನೇಶ್ವರ, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಶ್ವೇತಾ, ಪಾರ್ವತಮ್ಮ, ಹಾಲೇಶಪ್ಪ, ಶಿಲ್ಪ, ಸಿದ್ದೇಶ್ವರ, ನರಸಿಂಹಪ್ಪ, ಮಹೇಶ್ವರಪ್ಪ, ಮಂಜುಳಾ, ಸುನಿತಾ, ಮಂಜಾನಾಯ್ಕ, ನ್ಯಾಮತಿ ಪೊಲೀಸ್ ವೃತ್ತ ನಿರೀಕ್ಷಕ ರವಿಕುಮಾರ್, ರಾಜಸ್ವ ನಿರೀಕ್ಷಕ ಸಂತೋಷ, ಗೋವಿನಕೋವಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್, ವಿವಿಧ ಹೋಬಳಿ ಕೇಂದ್ರಗಳ ಕಂದಾಯ ಅಧಿಕಾರಿಗಳು ಇದ್ದರು.