ಹೊನ್ನಾಳಿ, ಅ.16- ನಾಡಿನ ಹಾಗೂ ಧರ್ಮಸಭೆಯಲ್ಲಿ ಉಪಸ್ಥಿತರಿರುವ ಶ್ರೀಗಳ ಮೂಲಕ ಭಗವಂತನಲ್ಲಿ ನಾವು-ನೀವೆಲ್ಲ ಭಕ್ತಿಯಿಂದ ಪ್ರಾರ್ಥಿಸಿ, ಬರುವ ದಿನಗಳಲ್ಲಾದರೂ ನಾಡಿನಲ್ಲಿ ವರುಣನ ಕೃಪೆಯಿಂದ ಮಳೆ ಬಂದು ಕೆರೆ, ನದಿ ಜಲಾಶಯಗಳಲ್ಲಿ ನೀರು ತುಂಬಿ, ಜನತೆಯಲ್ಲಿ ಬದುಕಿನ ಭರವಸೆ ಮೂಡಿಸಿ ದಸರಾ ಹಬ್ಬಕ್ಕೆ ಮೆರಗು ತರುವಂತಾಗಲಿ ಎಂದು ಶಾಸಕ ಶಾಂತನಗೌಡ ತಮ್ಮ ಮನದಾಳದ ಅಭಿಪ್ರಾಯವನ್ನು ಹಂಚಿಕೊಂಡರು.
ಹಿರೇಕಲ್ಮಠದ ಪಂಚಾಚಾರ್ಯ ಸಮುದಾಯ ಭವನದಲ್ಲಿ 10 ದಿನಗಳ ವರೆಗೆ ನಡೆಯುವ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ದುಷ್ಟರ ಶಿಕ್ಷಿಸಿ-ಶಿಷ್ಟರ ರಕ್ಷಿಸುವ ಈ ದಸರಾ ಹಬ್ಬವು ಮಳೆ ಕೊರತೆಯ ನಡುವೆಯೂ ಮಠ-ಮಂದಿರಗಳು ಭಕ್ತಿಯಿಂದ ಆಚರಿಸಲು ಮುಂದಾಗು ತ್ತಿದ್ದು, ಭೀಕರ ಬರಗಾಲ ಎದುರಿಸುತ್ತಿರುವ ಜನತೆ ಸಂ ಕಷ್ಟದ ದಿನಗಳಿಂದ ಹೊರಬರುವಂತಾಗಲಿ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಮುಷ್ಟೂರು ಶ್ರೀ ರುದ್ರಮುನಿ ಸ್ವಾಮೀಜಿ ವಹಿಸಿದ್ದರು. ರಾಂಪುರ ಶಿವಕುಮಾರ ಹಾಲಸ್ವಾಮೀಜಿ ಭಾಗವಹಿಸಿದ್ದರು. ಬಿ.ಸಿ.ಪಾಟೀಲ್‍ರವರಿಂದ ಉಪನ್ಯಾಸ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೆಂಗಲಹಳ್ಳಿ ಷಣ್ಮುಖಪ್ಪ, ಹುಣಸಘಟ್ಟ ಗದ್ದಿಗೇಶ್, ಕೋರಿದೀಪು, ಅಂದಾನಿ ಗಂಗಾಧರ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಇನ್ನಿತರರಿದ್ದರು.
ಚನ್ನಬಸಯ್ಯ ಸ್ವಾಗತಿಸಿ, ಅನ್ನದಾನಯ್ಯ ಶಾಸ್ತ್ರಿಗಳಿಂದ ವೇದಘೋಷ ನಡೆದು, ವಿಜಯಾನಂದ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.