ಚಿರತೆ ಪ್ರತ್ಯಕ್ಷ : ಬೋನಿಟ್ಟು ಸೆರೆಗೆ ಮುಂದಾದ ಅಧಿಕಾರಿಗಳು

ಚಿರತೆ ಪ್ರತ್ಯಕ್ಷ  : ಬೋನಿಟ್ಟು ಸೆರೆಗೆ ಮುಂದಾದ ಅಧಿಕಾರಿಗಳು

ಹೆಜ್ಜೆ ಗುರುತನ್ನು ಗಮನಿಸಿದರೆ ಆರು ವರ್ಷದ ಚಿರತೆ ಎಂಬುದು ಅಧಿಕಾರಿಗಳ ಸ್ಪಷ್ಟನೆ

ಹೊನ್ನಾಳಿ, ಮೇ 15- ಪಟ್ಟಣದ ತುಂಗಭದ್ರಾ ಬಡಾವಣೆ ಮೇಲು ಭಾಗದ ಜಮೀನೊಂದರಲ್ಲಿ ಇಂದು ಬೆಳಿಗ್ಗೆ ಚಿರತೆ ಪ್ರತ್ಯಕ್ಷವಾದ ಮಾಹಿತಿ ಜಮೀನಿನ ಮಾಲೀಕ ಸಂದೀಪ್ ತಂದೆ ಹೆಚ್‌.ಎಂ. ಚಂದ್ರುಕುಮಾರ್‌ರವರ ಮೂಲಕ ಪಡೆದು, ಸಂಬಂಧಪಟ್ಟ ಅಧಿಕಾರಿಗಳು ಬೋನಿಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆಗೆ ಮುಂದಾದ ಘಟನೆ ನಡೆದಿದೆ.

ಜಮೀನು ಮಾಲೀಕ ಸಂದೀಪ್ ಮಾತನಾಡಿ, ಮಾರಿಕೊಪ್ಪ ಸರ್ವೇ ನಂ.7/1 ರಲ್ಲಿನ 50 ಎಕರೆ ಕಾಡು ಪ್ರದೇಶದಂತಿರುವ ಜಮೀನಿನಲ್ಲಿ  ಚಿರತೆ ಕಂಡಿದ್ದು, ಕಳೆದ 5 ತಿಂಗಳ ಕೆಳಗೆ ಇಲ್ಲಿ ಬೋನಿಟ್ಟರೂ ಚಿರತೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಇಂದು ಚಿರತೆ ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಜಮೀನಿನ ಹತ್ತಿರದಲ್ಲಿ ಆಶ್ರಯ ಮನೆಗ ಳಿದ್ದು, ಇತ್ತೀಚೆಗೆ ಅಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಮಾರಿಕೊಪ್ಪ ಹಳದಮ್ಮ ದೇವಸ್ಥಾನದ ಬಳಿಯು ಕಂಡಿದೆ ಎಂದು ಜನ ಮಾಹಿತಿ ನೀಡಿದ್ದು, ಇಲ್ಲಿನ  ಜಮೀನುಗಳ ಕೆಲಸಗಳಿಗೆ ಕೂಲಿಗಳು ಬರದೇ ಪೇರಲ, ತೆಂಗು, ಅಡಿಕೆ, ತಾಳೆಯ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಹರಿಸಲು ಆಗದೆ ಕಳೆದ ಎರಡು ತಿಂಗಳಿಂದ ಒಂದು ಲಕ್ಷ ರೂ.ಗಳಿಗೂ ಹೆಚ್ಚು ಬೆಳೆಯ ಆದಾಯದಲ್ಲಿ ನಷ್ಟವಾಗಿದೆ.

ಅನೇಕ ಬಾರಿ ಬೋನಿಟ್ಟರು ಚಿರತೆ ಸೆರೆ ಸಿಕ್ಕಿಲ್ಲ. ಈ ಬಾರಿಯ ಕಾರ್ಯಚರಣೆ ಯಶಸ್ವಿಯಾಗಬೇಕೆಂದು ಒತ್ತಾಯಿಸುವ ಮೂಲಕ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶಿವಯೋಗಿ ಅವರು ಮಾತನಾಡಿ, ಚಟ್ನಹಳ್ಳಿ ಯಲ್ಲಿ ಇಟ್ಟಿದ್ದ ಚಿರತೆ ಹಿಡಿಯುವ ಬೋನನ್ನು ಇಲ್ಲಿ ಇಂದು ಇಟ್ಟು ಕಾರ್ಯಾಚರಣೆಗೆ ಮುಂದಾಗಿದ್ದು, ಇದು ಯಶಸ್ವಿಯಾಗಲು ನಾಯಿಯೊಂದನ್ನು ಬಳಸಲಾಗಿದೆ ಎಂದರು.

ನಾಲ್ಕು ಬೋನುಗಳಲ್ಲಿ ಎರಡು ಬೋನ್‌ಗಳನ್ನು ಶಿವಮೊಗ್ಗಕ್ಕೆ ಕಳಿಸಲಾಗಿದೆ ಮತ್ತು ಒಂದು ಇದೀಗ ಪಲವನಹಳ್ಳಿ ಗ್ರಾಮದಲ್ಲಿ ಇಟ್ಟಿದ್ದೇವೆ. ಚಟ್ನಹಳ್ಳಿಯಲ್ಲಿ ಇಟ್ಟಿದ್ದ ಬೋನನ್ನು ಇಲ್ಲಿರಿಸಲಾಗಿದೆ.

ತಾಲ್ಲೂಕಿನಲ್ಲಿ ಇತ್ತೀಚೆಗೆ ಮಂಗನ ಹಾಗು ಚಿರತೆ ಮತ್ತು ಆನೆ ಹಿಡಿಯುವಲ್ಲಿ ಅನೇಕ ಸಮಸ್ಯೆಗಳನ್ನು ಸಿಬ್ಬಂದಿಗಳು ಎದುರಿಸಿದ್ದೇವೆ ಎಂದರು. ಹೆಜ್ಜೆ ಗುರುತಿನ ಮೂಲಕ ಆರು ವರ್ಷದ ಚಿರತೆ ಎಂದು ತಿಳಿಯಬಹುದಾಗಿದೆ ಎಂದು ವಿವರಿಸಿದರು.

ಗಸ್ತು ಅರಣ್ಯ ಪಾಲಕ ಪ್ರಭಾಕರ್, ಸಿಬ್ಬಂದಿಗಳಾದ ಬಿ. ಅರುಣ್, ಚನ್ನಪ್ಪ, ಅರಬಗಟ್ಟೆ ಅರುಣ ಇನ್ನಿತರರಿದ್ದರು.

error: Content is protected !!