ಮೋದಿ ನಾಮಬಲ ನೀಡದ ಫಲ

ಮೋದಿ ನಾಮಬಲ ನೀಡದ ಫಲ

2019ಕ್ಕೆ ಹೋಲಿಸಿದರೆ ಬಿಜೆಪಿ ಮತ ಗಳಿಕೆ ಶೇ.22ರ ಕುಸಿತ

ದಾವಣಗೆರೆ, ಮೇ 14 – ಡಬಲ್ ಇಂಜಿನ್ ಸರ್ಕಾರ ಎಂಬ ಸೂತ್ರ ಹಿಡಿದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಮ ಬಲದ ಮೂಲಕವೇ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಬಿಜೆಪಿ ಪ್ರಯತ್ನ ಜಿಲ್ಲೆಯಲ್ಲಿ ಫಲ ನೀಡಿಲ್ಲ.

ಮೋದಿ ನಾಮದ ಬಲವೊಂದಿದ್ದರೆ ಸಾಕು ಎನ್ನುತ್ತಿದ್ದವರಿಗೆ, ಮತದಾರ ನೀನ್ಯಾಕೋ, ನಿನ್ನ ಹಂಗ್ಯಾಕೋ ಎಂದು ಹೇಳಿ ಕೈತೊಳೆದುಕೊಂಡಿರುವುದು ಫಲಿತಾಂಶದಿಂದ ಸ್ಪಷ್ಟವಾಗುತ್ತಿದೆ. 

ಈ ಬಾರಿ ದಾವಣಗೆರೆ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶೇ.46.61, ಬಿಜೆಪಿ ಶೇ.32.58, ಜೆಡಿಎಸ್‌ ಶೇ.5.17 ಹಾಗೂ ಇತರರು ಶೇ.15.64ರಷ್ಟು ಮತ ಪಡೆದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರ ಹೊರತಾದ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಶೇ.55ರಷ್ಟು ಮತ ಗಳಿಸಿತ್ತು. ಆದರೆ, ಈ ಬಾರಿಯ ಅವೇ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣ ಕೇವಲ ಶೇ.32.58! 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಬಿಜೆಪಿ ಗಳಿಕೆಯ ಮತಗಳ ಪ್ರಮಾಣ ಬರೋಬ್ಬರಿ ಶೇ.22ರಷ್ಟು ಕಡಿಮೆಯಾಗಿದೆ.

ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳ ಹೋಲಿಕೆ ಮಾಡಲಾಗದು. ಆದರೆ, ಈ ಬಾರಿ ಬಿಜೆಪಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿತ್ತು. ದಾವಣಗೆರೆಯಲ್ಲಿ ಪ್ರಧಾನಿಯವರ ಬೃಹತ್ ಸಮಾವೇಶವನ್ನೂ ನಡೆಸಲಾಗಿತ್ತು. ಪ್ರಧಾನಿ ಆಶೀರ್ವಾದದಿಂದ ಕರ್ನಾಟಕ ವಂಚಿತವಾಗಬಾರದು ಎಂದು ಬಿಜೆಪಿ ಹಿರಿಯ ನಾಯಕರು ಕಳಕಳಿಯನ್ನೂ ವ್ಯಕ್ತಪಡಿಸಿದ್ದರು. ಆದರೂ, ಮತದಾರ ಡಬಲ್ ಇಂಜಿನ್ ಸರ್ಕಾರದ ಸೂತ್ರದ ಬದಲು ಕಾಂಗ್ರೆಸ್‌ನ ಗ್ಯಾರಂಟಿಯನ್ನೇ ಆಯ್ಕೆ ಮಾಡಿಕೊಂಡಿದ್ದಾನೆ.

2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಶೇ.40.71ರಷ್ಟು ಮತ ಪಡೆದಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವೇ ಕ್ಷೇತ್ರಗಳಲ್ಲಿ ಶೇ.46.61ರಷ್ಟು ಮತ ಪಡೆದಿದೆ. ಪಕ್ಷ ಗಳಿಸಿದ ಮತಗಳ ಪ್ರಮಾಣ ಶೇ.6ರಷ್ಟು ಹೆಚ್ಚಾಗಿದೆ.

ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಕರ್ನಾಟಕದ ಮತದಾರ ಪ್ರತ್ಯೇಕವಾಗಿ ಪರಿಗಣಿಸುವಷ್ಟು ಪ್ರಜ್ಞಾವಂತಿಕೆ ತೋರುತ್ತಲೇ ಬಂದಿದ್ದಾನೆ. ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ನಡೆದ ಸಂದರ್ಭದಲ್ಲೂ ಮತದಾರ ಬೇರೆ ಬೇರೆ ರೀತಿಯಲ್ಲೇ ಮತ ಚಲಾಯಿಸಿದ್ದಾನೆ. ಹೀಗಾಗಿ ಬಿಜೆಪಿಯು ಡಬಲ್ ಇಂಜಿನ್ ಸರ್ಕಾರದ ಸೂತ್ರ ಮುಂದಿಟ್ಟು ಮೋದಿ ಅಬ್ಬರದ ಪ್ರಚಾರ ನಡೆಸಿದ್ದರೂ, ಸ್ಥಳೀಯ ವಿಷಯಗಳನ್ನೇ ಮತದಾರ ಪರಿಗಣಿಸಿದ್ದಾನೆ.

ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ. 2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ 50,374 ಮತಗಳು ದೊರೆತಿದ್ದವು. ಆಗ ಬಿಜೆಪಿಗೆ ಎರಡು ಪಟ್ಟು 1,04,480 ಮತಗಳು ದೊರೆತಿದ್ದವು! 2013ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಕೇವಲ 69,547 ಮತಗಳು ದೊರೆತಿದ್ದರೆ, ಕಾಂಗ್ರೆಸ್‌ಗೆ 94,019 ಮತಗಳು ಬಂದಿವೆ. 

ವಿಧಾನಸಭಾ ಚುನಾವಣೆ ಮುಗಿದ ಮುನ್ನೂರು ಚಿಲ್ಲರೆ ದಿನಗಳಲ್ಲೇ ಲೋಕಸಭಾ ಚುನಾವಣೆ ಬರಲಿದೆ. ದೇಶ ಹಾಗೂ ರಾಜ್ಯಗಳ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ವರ್ತಿಸುವ ಮತದಾರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೇರೆ ಜನಾದೇಶ ನೀಡುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭಾ ಫಲಿತಾಂಶ ಎಲ್ಲ ರಾಜಕೀಯ ಮುಖಂಡರಿಗೆ ಎಚ್ಚರಿಕೆ ಗಂಟೆಯಾಗಿದೆಯೇ ಹೊರತು, ನೆಮ್ಮದಿಯಾಗಿರಿಸುವ ಸಂದೇಶವಂತೂ ಅಲ್ಲ.

error: Content is protected !!