ಹರಿಹರ ನಗರಸಭೆ : 5.69 ಲಕ್ಷ ರೂ. ಉಳಿತಾಯ ಬಜೆಟ್

ಹರಿಹರ ನಗರಸಭೆ : 5.69 ಲಕ್ಷ ರೂ. ಉಳಿತಾಯ ಬಜೆಟ್

ವಿರೋಧ ಪಕ್ಷದವರ ಅಪಸ್ವರವಿಲ್ಲದೆ ಬಜೆಟ್ ಮಂಡಿಸಿದ ಅಧ್ಯಕ್ಷೆ ಶಾಹೀನಾಬಾನು

 ಸಂಸದ, ಶಾಸಕರು ಹೆಚ್ಚಿನ ಅನುದಾನ ನೀಡಬೇಕು : ಉಪಾಧ್ಯಕ್ಷ ಎ.ವಾಮನಮೂರ್ತಿ ಮನವಿ

ಹರಿಹರ, ಮಾ. 6-  ವಿರೋಧ ಪಕ್ಷದವರ ಯಾವುದೇ ರೀತಿಯ ಅಪಸ್ವರವಿಲ್ಲದೆ, ಇಲ್ಲಿನ ನಗರಸಭೆಯ 2023-24 ನೇ ಸಾಲಿನ ಬಜೆಟ್ ಮಂಡಿಸಿರುವ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್,  5.69  ಲಕ್ಷ  ರೂ.ಗಳ ಉಳಿತಾಯ  ತೋರಿಸಿದ್ದಾರೆ.

ನಗರಸಭೆ ಸಭಾಂಗಣದಲ್ಲಿ   ಬಜೆಟ್ ಮಂಡನೆ ಸಭೆ ನಿಗದಿಯಂತೆ ಆರಂಭವಾ ಯಿತು.  2023-24ನೇ ಸಾಲಿನ ಆರಂಭಿಕ ಶುಲ್ಕ 647.54 ಲಕ್ಷ ಇದ್ದು,  ನಿರೀಕ್ಷಿತ ಒಟ್ಟು ಆದಾಯ 6646.75   ಲಕ್ಷ ರೂ. ಗಳಾಗಿದ್ದು, ಒಟ್ಟು ವೆಚ್ಚಗಳು 5993.52 ಲಕ್ಷ ರೂ.ಗಳಾಗಿರುವುದಾಗಿ  ಹೇಳಿದರು. ಬಜೆಟ್‌ನ ಸಂಪೂರ್ಣ  ವರದಿಯನ್ನು ಉಪಾಧ್ಯಕ್ಷ ಎ. ವಾಮನಮೂರ್ತಿ ಓದಿದರು. 

ಆರಂಭದಲ್ಲಿ  ಸದಸ್ಯ ಆರ್.ಸಿ. ಜಾವೇದ್ ಮಾತನಾಡಿ, ನಗರದ ಹೈಸ್ಕೂಲ್ ಬಡಾವಣೆ, ರಾಜಾರಾಮ್ ಕಾಲೋನಿಯಲ್ಲಿ ಹಲವಾರು ದಿನಗಳಿಂದ ಪೌರ ಕಾರ್ಮಿಕರು  ಸ್ವಚ್ಚತೆ ಮಾಡದೇ ಇರುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು,  ಗಬ್ಬೆದ್ದು ನಾರುತ್ತಿದೆ.   ಅಲ್ಲದೇ ಆದಷ್ಟು ಬೇಗ  ಇಲ್ಲಿನ ನೀರಿನ ಕಂದಾಯದ ಸಮಸ್ಯೆ ಪರಿಹರಿಸ ಬೇಕಾಗಿದೆ ಎಂದು ಹೇಳಿದರು. 

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಗರದ ಪ್ರಮುಖ ವೃತ್ತದಲ್ಲಿ ಇರುವಂತಹ ಐಡಿಎಸ್ಎಂಟಿ ಕಟ್ಟಡ ಬಹಳ ಶಿಥಿಲವಾಗಿದ್ದರೂ ಸಹ ಅದರಲ್ಲಿ ಇರುವಂತಹ ವ್ಯಾಪಾರಸ್ಥರು ಸರಿಯಾದ ರೀತಿಯಲ್ಲಿ ಬಾಡಿಗೆ ಕಟ್ಟುತ್ತಿದ್ದಾರೆ. ಆದ್ದರಿಂದ ಅದನ್ನು ದುರಸ್ತಿಪಡಿಸ ಬೇಕು, ನಗರದ  ಹಲವಾರು ಬಡಾವಣೆಯಲ್ಲಿ ಗುದ್ದಲಿ ಪೂಜೆ ಮಾಡಿರುವ ಕಾಮಗಾರಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ಕೂಡಲೇ ವಿತರಣೆ ಮಾಡಬೇಕು, ನಗರದಲ್ಲಿ ಫ್ಲೆಕ್ಸ್ ಹಾವಳಿ ಬಹಳ ಆಗಿದೆ. ತಿಂಗಳು  ಕಳೆದರೂ ಅವುಗಳನ್ನು ತೆರವುಗೊಳಿಸುತ್ತಿಲ್ಲ. ಇವುಗಳಿಂದ ಆದಾಯ ಬರುವಂತಾಗಬೇಕು.  ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುತ್ತಿಲ್ಲ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ದರು.

ನಗರಸಭೆ ಉಪಾಧ್ಯಕ್ಷ ಎ. ವಾಮನಮೂರ್ತಿ ಮಾತನಾಡಿ, ನಗರದಲ್ಲಿ ಕಳೆದ 17 ವರ್ಷಗಳಿಂದ ನಗರಸಭೆ ಸ್ಥಿತಿ-ಗತಿ ಅದೇ ದಾಟಿಯಲ್ಲಿ ಸಾಗಿದೆ. ಮೊದಲಿಗಿಂತ ಆದಾಯದ ಮೂಲ ಹೆಚ್ಚಾಗಿದ್ದರೂ ಸಹ ಯಾವುದೇ ರೀತಿಯಲ್ಲಿ ನಗರ ಅಭಿವೃದ್ಧಿ ಹೊಂದುತ್ತಿರುವ ಲಕ್ಷಣಗಳು ಕಾಣದಾಗಿವೆ. ಮತ್ತು ನಗರ ಅಭಿವೃದ್ಧಿ ಆಗಬೇಕಾದರೆ ಎಂ.ಪಿ., ಎಂ.ಎಲ್.ಎ., ಮತ್ತು ಎಂ.ಎಲ್.ಸಿ.ಯವರು,  ಹೆಚ್ಚು ಅನುದಾನವನ್ನು ಕೊಟ್ಟಾಗ ಮಾತ್ರ ನಗರವನ್ನು ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು. 

ಗುತ್ತೂರು ಜಂಬಣ್ಣ ಮಾತನಾಡಿ, ಬಜೆಟ್ ಪುಸ್ತಕದ ಬದನೆಕಾಯಿಯಂತಾಗಿದೆ. ನಗರಸಭೆ ಯಲ್ಲಿ ಹತ್ತಕ್ಕೂ ಹೆಚ್ಚು ಸಭೆಗಳನ್ನು ಮಾಡಿ, ಹಲವಾರು ಸಮಸ್ಯೆಗಳನ್ನು ಪರಿಹರಿ ಸಲು ತಿಳಿಸಿದರೂ ಸಹ ಅವುಗಳಿಗೆ ಮಾನ್ಯತೆ ಯನ್ನು ಕೊಟ್ಟಿಲ್ಲ ಎಂದು ದೂರಿದರು.   

ಬಾಬುಲಾಲ್ ಮಾತನಾಡಿ, ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿ ಸಂತೋಷ ನಾಯ್ಕ್ ಸರಿಯಾದ ರೀತಿಯಲ್ಲಿ ಕರ್ತವ್ಯ   ಮಾಡುತ್ತಿಲ್ಲ. ಅವರಿಗೆ ಸರಿಯಾದ ರೀತಿಯಲ್ಲಿ ಹೇಳಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನಾನೇ ವಾರ್ಡಿನಲ್ಲಿ ಸಲಕಿ ಹಿಡಿದುಕೊಂಡು ಸ್ವಚ್ಚತೆಗೆ ಮುಂದಾಗ ಬೇಕಾಗುತ್ತದೆ ಎಂದು ಹೇಳಿದರು. 

ನಗರಸಭೆಯ ಸಿಬ್ಬಂದಿಗಳು ಎಷ್ಟು ಇದ್ದಾರೆ, ಅವರನ್ನು ಎಷ್ಟು ವಾರ್ಡ್‌ನಲ್ಲಿ ಕೆಲಸಕ್ಕೆ ಬಳಸಿಕೊಳ್ಳಲು ಅವಕಾಶ ಇರುತ್ತದೆಯೋ ಅಷ್ಟಕ್ಕೇ ಬಳಸಿಕೊಂಡು, ಉಳಿದ ವಾರ್ಡ್‌ನಲ್ಲಿ ಸ್ವಚ್ಚತೆ ಕಾರ್ಯವನ್ನು ಕಾಮಗಾರಿ ರೀತಿಯಲ್ಲಿ ಮಾಡುವುದಕ್ಕೆ ಆದೇಶ ಆಗಿದ್ದು, ಅದರಂತೆ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ನೀರಿನ ಸರಬರಾಜು    ವ್ಯವಸ್ಥೆ  ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದಿ ದ್ದೇವೆ ಎಂದು ಪೌರಾಯುಕ್ತ ಐಗೂರು ಬಸವರಾಜ್ ತಿಳಿಸಿದರು.  

ಎಸ್.ಎಂ.ವಸಂತ್, ಹನುಮಂತಪ್ಪ ಮಾತ ನಾಡಿದರು. ಅಧಿವೇಶನದಲ್ಲಿ  ಸದಸ್ಯರಾದ ಕೆ.ಜಿ. ಸಿದ್ದೇಶ್, ವಿರೂಪಾಕ್ಷಪ್ಪ, ರತ್ನ ಡಿ. ಉಜ್ಜೇಶ್, ಉಷಾ ಮಂಜುನಾಥ್ ಅಂಗಡಿ, ನಿಂಬಕ್ಕ ಚಂದಾಪೂರ್, ಅಲ್ತಾಫ್, ರಜನಿಕಾಂತ್, ಸಾವಿತ್ರಮ್ಮ, ರೇಷ್ಮಾಭಾನು ಜಾಕಿರ್,  ರಾಘವೇಂದ್ರ, ಲಕ್ಷ್ಮಿ ಮೋಹನ್, ಅಶ್ವಿನಿ ಕೃಷ್ಣ, ವಿಜಯಕುಮಾರ್, ಷಾಹಜಾದ್,  ಮುಖಂಡರಾದ ಮನ್ಸೂರ್‌ ಮದ್ದಿ, ದಾದಾಪೀರ್ ಭಾನುವಳ್ಳಿ, ಜಾಕೀರ್, ಅಧಿಕಾರಿಗಳಾದ ಎಇಇ ವಿನಯ್ ಕುಮಾರ್,  ನಾಗರಾಜ್, ಮಂಜುನಾಥ್, ತಿಪ್ಪೇಸ್ವಾಮಿ, ತಮ್ಮಯ್ಯ, ಗುರುಪ್ರಸಾದ್, ರವಿಪ್ರಕಾಶ್, ಇಂಜಿನಿಯರ್ ಮಂಜುನಾಥ್, ಶಿವಕುಮಾರ್, ನೌಷಾದ್, ಅಬ್ದುಲ್ ಹಮೀದ್ ಹಾಗು ಇತರರು ಹಾಜರಿದ್ದರು.

error: Content is protected !!