ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ

ಹರಪನಹಳ್ಳಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶಾಸಕರಾದ ಲತಾ ಮಲ್ಲಿಕಾರ್ಜುನ್ ಅಭಿಮತ

ಹರಪನಹಳ್ಳಿ, ಆ.25- ದೈಹಿಕ, ಮಾನಸಿಕವಾಗಿ ಆರೋಗ್ಯವಾಗಿರಲು ಕ್ರೀಡೆಗಳು ಬಹುಮುಖ್ಯ ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ನಿಸರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಶರಣ ಬಸವ ಬುದ್ದ ಭೀಮ್ ಜೀ ವಿದ್ಯಾಸಂಸ್ಥೆ, ನಿಸರ್ಗ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹರಪನಹಳ್ಳಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆ ನಮ್ಮ ದೇಹವನ್ನು ಆರೋಗ್ಯವಾಗಿರುಸುತ್ತದೆ. ಇದು ನಮ್ಮ ಕಣ್ಣುಗಳ ಬೆಳಕನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರಕ್ತವನ್ನು ಸರಿಯಾಗಿ ಪರಿಚಲನೆ ಮಾಡುತ್ತದೆ. ಕ್ರೀಡೆ ಎನ್ನುವುದು ನಮ್ಮ ಮನಸ್ಸಿನ ಮಟ್ಟವನ್ನು ಅಭಿವೃದ್ಧಿ ಪಡಿಸುವ, ಕೇಂದ್ರೀಕರಿಸುವ ಶಕ್ತಿಯನ್ನು  ಹೆಚ್ಚಿಸುವ ಒಂದು ವ್ಯಾಯಾಮವಾಗಿದೆ ಎಂದರು.

ನೀಲಗುಂದದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕ್ರೀಡೆ ನಮ್ಮ ಜೀವನದ ಒಂದು ಭಾಗವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ನಮ್ಮ ದೇಹದ ರಕ್ತಪರಿಚಲನೆಗೆ ಸಹಕಾರಿಯಾಗಿದೆ. ಕ್ರೀಡೆ ನಮ್ಮ ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಯಶಸ್ವೀ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಮಾನಸಿಕ ಬೆಳವಣಿಗೆಯು ನಮ್ಮ ಶಾಲಾ ದಿನಗಳಿಂದ ಪ್ರಾರಂಭವಾಗುತ್ತದೆ. ಆದರೆ ದೈಹಿಕ ಬೆಳವಣಿಗೆಗೆ ವ್ಯಾಯಾಮವು ಸಹಕಾರಿಯಾಗುತ್ತದೆ ಎಂದರು. 

ಶ್ರೀ ಶರಣ ಬಸವ ಬುದ್ದ ಭೀಮ್ ಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ  ಗುಂಡಗತ್ತಿ ಕೆ.ಕೊಟ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳಿಂದ  ಆರೋಗ್ಯ ಸಮತೋಲನವಾಗಿ ಕಾಪಾಡಲು ಸಹಕಾರಿಯಾಗಿದೆ. ನಿದ್ರಾ ಹೀನತೆ ಹಾಗೂ ಒತ್ತಡವನ್ನು  ಕಡಿಮೆ ಮಾಡುವುದರ ಜೊತೆಗೆ ಜನರಲ್ಲಿ ಶಿಸ್ತು, ಒಗ್ಗಟ್ಟು ಹಾಗೂ ಸಂಘಟನಾ ಶಕ್ತಿಯನ್ನು ಬೆಳೆಸುತ್ತದೆ ಎಂದರು.

ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ ಧ್ವಜವಂದನೆ ಸ್ವೀಕಾರ ಮಾಡಿದರು. ಸಿ.ಪಿ.ಐ. ನಾಗರಾಜ ಕಮ್ಮಾರ್ ಕ್ರೀಡಾ ಜ್ಯೋತಿ ಬೆಳಗಿಸಿ ದರು. ನಿಸರ್ಗ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಆರ್.ಎಚ್.ಕಲ್ಯಾಣದವರ್ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶರಣ ಬಸವ ಬುದ್ದ ಭೀಮ್ ಜೀ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸಿ.ಕೊಟ್ರಮ್ಮ ಕೊಟ್ರಪ್ಪ, ಕಾರ್ಯದರ್ಶಿ ವ್ಯವಸ್ಥಾಪಕ ರಾಜು ಎಲಿಗಾರ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ, ದೈಹಿಕ ಶಿಕ್ಷಣ ಉಪನ್ಯಾಸಕ ಸಾಗರ್.ಪಿ.ಬಿ ಸೇರಿದಂತೆ ಇತರರು ಇದ್ದರು.

error: Content is protected !!