2023 ರೊಳಗೆ ರೈತರ ಆದಾಯ ದ್ವಿಗುಣಕ್ಕೆ ಮೋದಿ ಸಂಕಲ್ಪ

ಹರಿಹರ : ಬಿಜೆಪಿಯ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ

ಹರಿಹರ, ನ.28- ಗ್ರಾಮ ಪಂಚಾಯ್ತಿಗಳಲ್ಲಿ  ಬಿಜೆಪಿ ಬಾವುಟ ಹಾರಿಸಿದಾಗ ಮಾತ್ರ ನಮ್ಮ ಸರ್ಕಾರದ ಯೋಜನೆಗಳು ಸಾಮಾನ್ಯರನ್ನು ತಲುಪಲು ಸಹಕಾರಿಯಾಗುತ್ತದೆ ಎಂದು ಲೋಕಸಭಾ ಸದಸ್ಯ ಜಿ.ಎಂ ಸಿದ್ದೇಶ್ವರ ಅಭಿಪ್ರಾಯಪಟ್ಟರು.

ನಗರದ ಎಚ್.ಕೆ ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಬಿಜೆಪಿ ನಗರ ಮಂಡಲದ ಪ್ರಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ದೊಡ್ಡದು ಎಂದು ಅವರು ಹೇಳಿದರು.

ದೇಶದಲ್ಲಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಹಲವಾರು ರೈತಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ 2023ರೊಳಗೆ ಅವರ ಆದಾಯ ದ್ವಿಗುಣ ಮಾಡುವ ಸಂಕಲ್ಪ ಮಾಡಿದ್ದಾರೆ.  ಜಿಲ್ಲೆಯಲ್ಲಿ ಉಜ್ವಲ ಯೋಜನೆಯಡಿಯಲ್ಲಿ 1 ಲಕ್ಷದ 20 ಸಾವಿರ ಗ್ಯಾಸ್‌ ವಿತರಣೆ ಮಾಡಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಮಾತನಾಡಿ, ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ, ಕಾರ್ಯಕರ್ತ ಆಧಾರಿತ ಪಕ್ಷ, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಪ್ರಧಾನ ಮಂತ್ರಿಯನ್ನಾಗಿ, ರಾಜಸಭಾ ಮತ್ತು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ಬಿಜೆಪಿ ಕೇವಲ ಚುನಾವಣೆ ಸಮಯದಲ್ಲಿ ಸಕ್ರಿಯವಾಗಿರದೆ, ಸೇವಾ ಕ್ಷೇತ್ರದಲ್ಲಿಯೂ ತನ್ನದೇ ಆದ ಕೆಲಸ ಮಾಡಿ ಜನಸಾಮಾನ್ಯರ ಕಷ್ಟ – ಸುಖಗಳಲ್ಲಿ ಭಾಗಿಯಾಗುವ ಮೂಲಕ ನಾವು ಇತರರಿಗಿಂತ ಭಿನ್ನ ಎನ್ನುವುದನ್ನು ತೋರಿಸಿ ಕೊಟ್ಟ ಸಾವಿರಾರು ಉದಾಹರಣೆಗಳು ಇವೆ.

ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ,  ಪ್ರಶಿಕ್ಷಣ ಕಾರ್ಯಗಾರದಲ್ಲಿ ತರಬೇತಿಯನ್ನು ಪಡೆದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್, ನಗರ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಸದಸ್ಯ ರಾಜು ರೋಖಡೆ, ನಗರಸಭಾ ಸದಸ್ಯ ರಜನಿಕಾಂತ್, ವಿಜಯಕುಮಾರ್, ನೀತಾ
ಮೆಹರಾಡೆ, ಅಶ್ವಿನಿ ಕೆ, ನಗರ ಪ್ರಧಾನ ಕಾರ್ಯದರ್ಶಿ ಮಂಜಾನಾಯ್ಕ್, ಮಾರುತಿ ಶೆಟ್ಟಿ ಹಾಗು ಇತರರು ಇದ್ದರು.

error: Content is protected !!