ನಿವೇಶನದ ಆಮಿಷವೊಡ್ಡಿ ವಂಚಿಸಿದ ಮಹಿಳೆ

ಪೊಲೀಸ್ ಮೊರೆ ಹೋದ ಅನೇಕ ಮಹಿಳೆಯರು

ದಾವಣಗೆರೆ, ನ.28- ನಿವೇಶನ ನೀಡುವುದಾಗಿ ಆಮಿಷವೊಡ್ಡಿ ಮಹಿಳೆಯೋರ್ವಳು ಅನೇಕ ಮಹಿಳೆಯರಿಂದ ಹಣ ದೋಚಿ ವಂಚಿಸಲಾಗಿದೆ ಎನ್ನಲಾಗಿದ್ದು, ವಂಚನೆಗೊಳಗಾದ ಮಹಿಳೆಯರು ನ್ಯಾಯಕ್ಕಾಗಿ ಇದೀಗ ಜಿಲ್ಲಾ ಪೊಲೀಸ್ ಮೊರೆ ಇಟ್ಟಿದ್ದಾರೆ.

ನಗರದ ಪ್ರತಿಷ್ಠಿತ‌ ಬಡಾವಣೆಯೊಂದರ ಈಕೆ ಈ ಬಡಾವಣೆ ಭಾಗದ ಮಹಿಳೆಯರನ್ನು ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಾ, ಪ್ರತಿಷ್ಠಿತ ಬಡಾವಣೆಯಲ್ಲಿ ತನ್ನ ಹೆಸರಿನಲ್ಲಿರುವ ದೊಡ್ಡ ನಿವೇಶನವನ್ನು ಮಾರಾಟ ಮಾಡುವುದಾಗಿ ನಂಬಿಸಿ, ಮುಂಗಡವಾಗಿ ಲಕ್ಷಾಂತರ ರೂ. ಹಣ ಪಡೆದು,  ನಿವೇಶನವನ್ನೂ ಕೊಡದೇ, ಹಣವನ್ನೂ ಮರಳಿಸದೇ ಹಣ ಕೇಳಿದವರಿಗೆ ಸತಾಯಿಸುತ್ತಿದ್ದಳು. ಒಂದೇ ನಿವೇಶನವನ್ನು ಹತ್ತಾರು ಜನರಿಗೆ ತೋರಿಸಿ ವಂಚಿಸಿರುವುದಾಗಿ ಆರೋಪ ಕೇಳಿ ಬರುತ್ತಿದೆ.

ಮಹಿಳೆಯ ಮಾತು ನಂಬಿ ದೊಡ್ಡ ನಿವೇಶನ ಸಿಗುವುದೆಂಬ ಆಸೆಯಿಂದ ಮಹಿಳಾ ಉದ್ಯಮಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳ ಮುಖಂಡರು, ವ್ಯಾಪಾರಸ್ಥರು ಹಣ ನೀಡಿ ವಂಚನೆಗೊಳಗಾಗಿದ್ದಾರೆ. ಒಂದೇ ನಿವೇಶನಕ್ಕೆ ಇಬ್ಬರು ಹಣ ಕೊಟ್ಟು ಕಳೆದುಕೊಂಡರೆನ್ನಲಾಗಿದೆ.

ತಮ್ಮ ನಾಲ್ವರು ಸ್ನೇಹಿತರ ಬಳಿ 1 ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಪೈಕಿ ಒಬ್ಬರು 10 ಲಕ್ಷ, ಮತ್ತೊಬ್ಬರು 5 ಲಕ್ಷ, ಮತ್ತೆ ಒಬ್ಬರು 7 ಲಕ್ಷ ಹೀಗೆ ಹಣವನ್ನು ಆ ಮಹಿಳೆಗೆ ಕೊಟ್ಟು ವಂಚನೆಗೊಳಗಾಗಿದ್ದಾರೆ.‌ ಬಡ್ಡಿ ಆಸೆಗೆ ಹಣ ಕೊಟ್ಟವರು ಇದ್ದರೆ, ಚಿನ್ನದ ಆಸೆಗೆ, ನಿವೇಶನ ಸಿಗುವ ಆಸೆಯಿಂದ ಹಣ ಕೊಟ್ಟವರಿದ್ದಾರೆ. 

ಹಣ ಕೊಟ್ಟವರು ವಾಪಾಸ್ ಕೇಳಿದರೂ ವರ್ಷ ಕಳೆದರೂ ಹಣ ಕೊಟ್ಟಿಲ್ಲ. ಇದರಿಂದ ಪೊಲೀಸ್ ಠಾಣೆ ಮೊರೆ ಹೋಗಿದ್ದು, ಹಣ ಮರಳಿ ಕೊಡಿಸುವಂತೆ ಮಹಿಳೆಯರು, ವ್ಯಾಪಾರಸ್ಥರು, ಉದ್ಯೋಗಸ್ಥರು ಮನವಿ ಮಾಡಿದ್ದಾರೆ.

ಸೈಟ್ ಆಸೆಗಾಗಿ, ಬಡ್ಡಿ ಆಸೆಯಿಂದ, ಒಡವೆ ಮೇಲಿನ ವ್ಯಾಮೋಹದಿಂದಾಗಿ ಹಣ ಕೊಟ್ಟವರಲ್ಲಿ ಬಹುತೇಕರು ಮಹಿಳೆಯರಾಗಿದ್ದಾರೆ. ಇದರಲ್ಲಿ ಅನೇಕರು ತಮ್ಮ ಪತಿಗೆ, ಕುಟುಂಬ ಸದಸ್ಯರಿಗೆ ಗೊತ್ತಿಲ್ಲದೇ ವಂಚಕ ಮಹಿಳೆಯ ಜೊತೆಗೆ ಹಣದ ವ್ಯವಹಾರ ಮಾಡಿದವರಾಗಿದ್ದಾರೆ. ಈಗ ವಂಚಕ ಮಹಿಳೆ ಹಣ ನೀಡದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದಾರೆ. ಮಹಿಳೆಯ ವಂಚನೆಗೆ ಸೀರೆ ವ್ಯಾಪಾರ ಮಾಡುತ್ತಿದ್ದ ಬಡ ಮಹಿಳೆಯೂ 6 ಲಕ್ಷ ರೂ. ಕೊಟ್ಟು ಕೈ ಸುಟ್ಟು ಕೊಂಡಿದ್ದಾರೆ. 

ಹೀಗೆ ಹಣ ಕೊಟ್ಟವರಿಗೆ ವಂಚಕ ಮಹಿಳೆಯು ಚೆಕ್ ಕೊಟ್ಟು ವಂಚನೆ ಮಾಡಿದ್ದಾರೆಂದು ಹೇಳಲಾಗಿದೆ. 

ಸೈಟ್ ಮಾರುವುದಾಗಿ ಹೇಳಿದ್ದ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ. ಶನಿವಾರ ರಾತ್ರಿವರೆಗೂ ಯಾವುದೇ ಕೇಸ್ ದಾಖಲಾಗಿರಲಿಲ್ಲ.

error: Content is protected !!