ಎಷ್ಟೇ ಕೊರೊನಾ ಪ್ರಕರಣಗಳು ಬಂದರೂ ಎದುರಿಸಲು ಸಿದ್ಧ

ಜಗಳೂರಿನ ಕಂಟೈನ್ಮೆಂಟ್ ಝೋನ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ : ಕೋವಿಡ್  ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ

ಜಗಳೂರು, ಜು. 14 – ಜಗಳೂರು ಪಟ್ಟಣದ ಕಂಟೈನ್ಮೆಂಟ್ ಝೋನ್‍ಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಇಂದು ದಿಢೀರ್ ಭೇಟಿ  ನೀಡಿ, ಸ್ಥಳ ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿ ಕೋವಿಡ್  ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ  ಕೊರೊನಾ ವೈರಸ್ ಬಗ್ಗೆ ಭಯ ಕಾಡುತ್ತಿದೆ. ಇದರ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುವುದರ ಜೊತೆಗೆ  ಅಧಿಕಾರಿಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಪಟ್ಟಣದ  ಹೊರಕೆರೆಯ ದೊಡ್ಡ ಮಾರಿ ಕಾಂಬ ದೇವಸ್ಥಾನದ ಹತ್ತಿರ, ರಾಮಾಲಯ ರಸ್ತೆ, ಜೆ.ಸಿ.ಆರ್. ಬಡಾವಣೆಯ ಕಂಟೈನ್ಮೆಂಟ್ ಝೋನ್‍ಗಳಿಗೆ ಭೇಟಿ ನೀಡಿದ ಅವರು, ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರದಿಂದ ಇರಬೇಕು. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಯಾರಾದರೂ ಬಂದರೆ ತಕ್ಷಣವೇ  ಹತ್ತಿರದ ವೈದ್ಯರುಗಳಿಗೆ ಮಾಹಿತಿ ತಿಳಿಸಿ. ಕಂಟೈನ್ಮೆಂಟ್‍ನ ಮಾರ್ಗ ಸೂಚಿಗಳನ್ನು ಪಾಲಿಸಿ ಎಂದು ಝೋನ್ ಒಳಗಡೆ ಇರುವ  ನಿವಾಸಿಗಳಿಗೆ ಮನವಿ ಮಾಡಿದರು. 

ನಂತರ ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಕೋವಿಡ್-19 ನಿಯಂತ್ರಣದ ಬಗ್ಗೆ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ  ಆರೋಗ್ಯಾಧಿಕಾರಿಯಿಂದ ತಾಲ್ಲೂಕಿನಲ್ಲಿ ಎಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ, ಎಷ್ಟು ಜನ ಗುಣ ಮುಖರಾಗಿದ್ದಾರೆ, ಎಷ್ಟು ಜನ ಕ್ವಾರಂಟೈನ್‍ನಲ್ಲಿದ್ದಾರೆ   ಎಂದು ಮಾಹಿತಿ ಪಡೆದುಕೊಂಡರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ನೀವು ಏನು ಕೆಲಸ ಮಾಡುತ್ತಿದ್ದೀರಿ ? ಎಂದು ಮುಖ್ಯಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದು ಕೊಂಡರು.

ಪಟ್ಟಣ ಪಂಚಾಯಿತಿ ವತಿಯಿಂದ  ಕಂಟೈನ್ಮೆಂಟ್  ಝೋನ್‍ಗಳಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ. ಅಲ್ಲಿನ ಜನರಿಗೆ ಯಾವ ರೀತಿ ಜಾಗೃತಿ ಮೂಡಿಸಿದ್ದಿರಿ ಮತ್ತು ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದೆಯೇ ಮತ್ತು ಕೋವಿಡ್ ಪ್ರಕರಣ ಪತ್ತೆಯಾದ  ಬಡಾವಣೆಗಳಲ್ಲಿ ಸ್ಯಾನಿಟೈಸರಿಂಗ್ ಮಾಡಲಾಗಿದೆಯಾ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. 

 ನಂತರ ಪೋಲೀಸ್ ಇಲಾಖೆಯ ವೃತ್ತ ನಿರೀಕ್ಷಕ  ದುರಗಪ್ಪ ಅವರಿಗೆ  ಇಲ್ಲಿಯವರೆಗೆ ಮಾಸ್ಕ್  ಹಾಕದೇ ಇರುವ ಎಷ್ಟು ಜನರಿಗೆ ನಿಮ್ಮ ಪೊಲೀಸ್ ಇಲಾಖೆಯಿಂದ  ಇದುವರೆಗೆ ಎಷ್ಟು  ದಂಡ ಹಾಕಿದ್ದೀರಿ ಎಂದು ಮಾಹಿತಿ ಕೇಳಿದಾಗ, ಸಿಪಿಐ ದುರುಗಪ್ಪ, ಮಾಸ್ಕ್ ಹಾಕದೆ ಇರುವ 140 ಜನರಿಗೆ ದಂಡ ಹಾಕಲಾಗಿದೆ ಎಂದರು.

ನಂತರ ಪೋಲೀಸ್ ವರಿಷ್ಟಾಧಿಕಾರಿಗಳು ಜಿಲ್ಲಾಧಿಕಾರಿಗಳು ಒಂದು ದಿನಕ್ಕೆ ಕನಿಷ್ಟ 300 ಕೇಸ್ ದಾಖಲೆಗಳು ಮಾಡಬೇಕು  ಗ್ರಾಮೀಣ  ಮತ್ತು ಪಟ್ಟಣದ 18 ವಾರ್ಡಗಳಲ್ಲಿ ದಂಡ ಹಾಕಿ ಮಾಹಿತಿ ನೀಡಬೇಕೆಂದು ಸೂಚನೆನೀಡಿದರು.

ತಾಲ್ಲೂಕಿನಲ್ಲಿ ಜನತೆ ಭಯ ಭೀತಿಯಿಂದ ಆತಂಕದಲ್ಲಿದ್ದಾರೆ.  ಜನರಿಗೆ ಸ್ಪಂದಿಸಿ ಕೆಲಸ ಮಾಡಿ, ಪತ್ರಕರ್ತರು ಫೋನ್ ಮಾಡಿದರೆ ಸೌಜನ್ಯದಿಂದ ಫೋನ್  ರಿಸೀವ್ ಮಾಡಿ, ಅವರಿಗೆ ಕೇಳಿದ ವರದಿಯನ್ನು ಕೊಡಿ ಎಂದು ತಹಶೀಲ್ದಾರ್ ನಾಗವೇಣಿ ಅವರಿಗೆ, ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. 

ಪ್ರತಿದಿನ ತಾಲ್ಲೂಕು ಮಟ್ಟದಲ್ಲಿ ತಹಶೀ ಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿ ಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಬೆಳಿಗ್ಗೆ ಮತ್ತು ಸಂಜೆ ಸಭೆ ಸೇರಿ ಕೊರೊನಾ ನಿಯಂ ತ್ರಣದ ಬಗ್ಗೆ ಚರ್ಚೆ ಮಾಡಿ, ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು.  ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಎಷ್ಟೇ ಪ್ರಕರಣ ಗಳು ಬಂದರು ಎದುರಿಸಲು ಜಿಲ್ಲಾಡಳಿತ ಸಿದ್ಧ ವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿ ಕಾರಿ ಹನುಮಂತರಾಯಪ್ಪ, ತಾಲ್ಲೂಕು ದಂಡಾಧಿಕಾರಿ ನಾಗವೇಣಿ, ತಾಲ್ಲೂಕು  ಕಾರ್ಯನಿರ್ವಾಹಕಾಧಿಕಾರಿ, ಮಲ್ಲನಾಯ್ಕ, ಸಿಪಿಐ ದುರುಗಪ್ಪ, ಪಿಎಸ್ಐ ಉಮೇಶ್ ಬಾಬು ಮತ್ತಿತರರು ಭಾಗವಹಿಸಿದ್ದರು.

error: Content is protected !!