ದಾವಣಗೆರೆ, ಜೂ.21- ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ನಗರದಲ್ಲಿ ಮೊನ್ನೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಕಚೇರಿ ಬಳಿ ಪ್ರತಿಭಟಿಸಿ ಕಾರ್ಮಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರ ಆನ್‍ಲೈನ್ ನೋಂದಣಿ ಪ್ರಕ್ರಿ ಯೆಯಲ್ಲಿ ನೂರಕ್ಕೆ 50 ರಷ್ಟು ಅಧಿಕ ನಕಲಿ ಕಾರ್ಮಿಕರು ಸೇರ್ಪಡೆಯಾಗುತ್ತಿದ್ದಾರೆ. ಇದನ್ನು ತಡೆಯ ಬೇಕು, ನಕಲಿ ಕಾರ್ಡ್‍ದಾರರನ್ನು ಪತ್ತೆ ಹಚ್ಚಬೇಕು, 3 ತಿಂಗಳಿಗೊಮ್ಮೆ ಕಾರ್ಮಿಕ ಸಂಘಟನೆಗಳ ಸಭೆ ಕರೆಯಬೇಕು, ಮನೆ ಕಟ್ಟುವ ವಸ್ತುಗಳ ಬೆಲೆ ಏರಿಕೆಯಾಗಿದ್ದು, ದರ ಕಡಿತದ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಬೇಕು, ಎಲ್ಲ ಸಂಘಟನೆಗಳ ಲೆಕ್ಕಪರಿಶೀಲನಾ ವರದಿಯನ್ನು ಇಲಾಖೆಗೆ ತರಿಸಿಕೊಳ್ಳಬೇಕು, ಎಂ ಸ್ಯಾಂಡ್ ಮತ್ತು ಮರಳು ಡಿಪೋವನ್ನು ಜಿಲ್ಲಾಡಳಿತದಿಂದಲೇ ತೆರೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಹೆಚ್.ಜಿ. ಉಮೇಶ್, ಫೈಯಾಜ್ ಆಹಮದ್, ಸಿದ್ದೇಶ್, ಭಜನೆ ಹನುಮಂತಪ್ಪ, ಮುರುಗೇಶ್, ದುಗ್ಗಪ್ಪ, ನಾಗರಾಜ್, ಮಣಿ, ಲಕ್ಷ್ಮಣ ಶ್ಯಾಗಲೆ, ಸಿದ್ದಲಿಂಗಪ್ಪ ಸೇರಿದಂತೆ ಮತ್ತಿತರರಿದ್ದರು.