ಹೊಸ ಶೈಕ್ಷಣಿಕ ವರ್ಷ ತೂಗುಯ್ಯಾಲೆಗೆ ಸಿಲುಕಿರುವುದರಿಂದ ಎರಡು ವರ್ಷದ ಆದಾಯಕ್ಕೆ ತಡೆ
ದಾವಣಗೆರೆ, ಜೂ. 21 – ಮಾರ್ಚ್ನಿಂದ ಸಾಮಾನ್ಯವಾಗಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ಎದು ರಾಗುತ್ತಿದ್ದವು. ಆದರೆ, ಈ ವರ್ಷ ಕೊರೊನಾ ಕಾರಣದಿಂದಾಗಿ ಮಕ್ಕಳಿ ಗೆ ಪರೀಕ್ಷೆ ರದ್ದಾಗಿದ್ದರೆ, ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಬದುಕಿನ ಪರೀಕ್ಷೆ ಎದುರಾಗಿದೆ!
ಕೊರೊನಾ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ.ಯವರೆಗಿನ ಪರೀಕ್ಷೆಗಳು ಅಪೂರ್ಣವಾಗಿ, ಪರೀಕ್ಷೆ ರಹಿತವಾಗಿ ಪಾಸ್ ಮಾಡುವ ಪರಿಸ್ಥಿತಿ ಬಂದಿದೆ. ಆದರೆ, ಮತ್ತೆ ಶಾಲೆಗಳು ಪುನರಾರಂಭವಾಗುವ ಬಗ್ಗೆ ಅನಿಶ್ಚಿತತೆ ಉಂಟಾಗಿ ಶೈಕ್ಷಣಿಕ ಭವಿಷ್ಯ ತೂಗುಯ್ಯಾಲೆಗೆ ಸಿಲುಕಿದೆ.
ಮಕ್ಕಳ ಆರೋಗ್ಯದ ಬಗ್ಗೆ ಕಳವಳ ಹೊಂದಿರುವ ಸಾಕಷ್ಟು ಪೋಷಕರು ಶಾಲೆ ಪುನರಾರಂಭದ ಬಗ್ಗೆ ಒಲವು ತೋರುತ್ತಿಲ್ಲ. ಮತ್ತೊಂದೆಡೆ ಕಳೆದ ವರ್ಷದ ಮಕ್ಕಳ ಶುಲ್ಕ ವಸೂಲಿಗೆ ಬಲವಂತ ಮಾಡಬಾರದು ಎಂದು ಸರ್ಕಾರ ತಿಳಿಸಿದ ಹಿನ್ನೆಲೆಯಲ್ಲಿ, ಸಾಕಷ್ಟು ಖಾಸಗಿ ಶಾಲೆಗಳಿಗೆ ಶುಲ್ಕ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಹೊಸ ಶೈಕ್ಷಣಿಕ ವರ್ಷ ತೂಗುಯ್ಯಾಲೆಗೆ ಸಿಲುಕಿರುವುದರಿಂದ ಎರಡು ವರ್ಷದ ಆದಾಯಕ್ಕೆ ತಡೆ ಹಾಕಿದಂತಾಗಿದೆ.
ಇದರಿಂದಾಗಿ ಸಾಕಷ್ಟು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹಣಕಾಸು ಬಿಕ್ಕಟ್ಟಿಗೆ ಸಿಲುಕಿವೆ. ಇದರ ಪರಿಣಾಮ ಶಾಲಾ ಶಿಕ್ಷಕರ ಮೇಲೆ ಆಗುತ್ತಿದೆ. ಕೆಲವು ಖಾಸಗಿ ಶಾಲೆಗಳು ಮಾತ್ರ ತಮ್ಮ ಸಿಬ್ಬಂದಿಗೆ ವೇತನ ಪಾವತಿಸುವಷ್ಟು ಅನುಕೂಲ ಹೊಂದಿವೆ. ಕೆಲ ಶಾಲೆಗಳು ಅರ್ಧ ದಷ್ಟು ವೇತನ ಪಾವತಿ ಮಾಡಿದರೆ, ಇನ್ನು ಸಾಕಷ್ಟು ಶಾಲೆಗಳು, §ಪರಿಸ್ಥಿತಿ ನಿಮಗೇ ಗೊತ್ತಲ್ಲ’ ಎಂಬ ರಾಗ ದೊಂದಿಗೆ ವೇತನ ಬಾಕಿ ಉಳಿಸಿವೆ.
ಕೊರೊನಾದಿಂದ ಉಂಟಾಗಿ ರುವ ಅನಿಶ್ಚಿತತೆಗೆ ಸಿಲುಕಿರುವ ಖಾಸಗಿ ಶಾಲೆಗಳ ಹಲವು ಶಿಕ್ಷಕರು ಹೊಟ್ಟೆ ಪಾಡಿಗಾಗಿ ಬೇರೆ ವೃತ್ತಿಯನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಕೆಲವರು ತರಕಾರಿ, ಮಾಸ್ಕ್ ಇತ್ಯಾದಿಗಳ ಮಾರಾಟದಲ್ಲೂ ತೊಡಗಿದ್ದಾರೆ. ಇನ್ನು ಕೆಲವರು ಇಂದಲ್ಲಾ ನಾಳೆ ಪರಿಸ್ಥಿತಿ ಸರಿ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ಭವಿಷ್ಯ ನಿಧಿ ಸೇರಿದಂತೆ ಉಳಿತಾಯದ ಹಣ ಖಾಲಿ ಮಾಡಿಕೊಳ್ಳುತ್ತಿದ್ದಾರೆ.
ತಿಂಗಳ ವೇತನ ಕಡಿತವಾದರೆ ಕಷ್ಟವಾಗುತ್ತದೆ ಎಂದು ಸರ್ಕಾರಿ ನೌಕರರೇ ಹೇಳುವಾಗ, ಖಾಸಗಿ ಅನುದಾನ ರಹಿತ ಶಿಕ್ಷಕರ ಪರಿಸ್ಥಿತಿ ಹೇಗಿರಬೇಡ? ಹಾಲಿನಿಂದ ಹಿಡಿದು ಮನೆ ಬಾಡಿಗೆಯವರೆಗಿನ ಎಲ್ಲ ಖರ್ಚುಗಳನ್ನು ನಿಭಾಯಿಸುವುದು ಹರಸಾಹಸವೇ ಆಗುತ್ತಿದೆ ಎಂದು ಖಾಸಗಿ ಶಾಲೆಯ ಶಿಕ್ಷಕ ರಾಘವೇಂದ್ರ ಹೇಳಿದ್ದಾರೆ.
§ಒಂದು ವರ್ಷ ಶಾಲೆಗೆ ಹೋಗದಿದ್ದರೆ ಏನೂ ಆಗುವುದಿಲ್ಲ’ ಎಂಬ ಉಡಾಫೆಯ ಮಾತುಗಳೂ ಹಲವೆಡೆಯಿಂದ ಕೇಳಿ ಬರುತ್ತಿವೆ. ಆದರೆ, ಮಕ್ಕಳಿಗೆ ಏನಾಗುತ್ತದೋ ಬಿಡುತ್ತದೆ, ಅನುದಾನ ರಹಿತ ಶಾಲೆಗಳು ಹಾಗೂ ಅಲ್ಲಿನ ಶಿಕ್ಷಕರು ಕಂಗಾಲಾಗುವುದಂತೂ ಖಚಿತವಾಗಿದೆ.
ಕಳೆದ ವರ್ಷದ ಶುಲ್ಕ ಪೂರ್ಣ ವಸೂಲಿಯಾಗದ ಕಾರಣಕ್ಕಾಗಿಯೇ ಸಮಸ್ಯೆ ಉಂಟಾಗಿದೆ. ಇನ್ನೊಂದು ವರ್ಷ ಶಾಲೆ ನಡೆಯದೇ ಹೋದರೆ, ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸಾಕಷ್ಟು ಬಾಗಿಲು ಮುಚ್ಚುವುದು ಖಚಿತ ಎಂಬುದು ಈ ವಲಯದಲ್ಲಿರುವವರ ಅಭಿಪ್ರಾಯ.
ಹಾಗೇನಾದರೂ ಆದಲ್ಲಿ, ಖಾಸಗಿ ಶಾಲೆಗಳನ್ನು ಅವಲಂಬಿಸಿರುವ ಶಿಕ್ಷಕರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ. ಶಿಕ್ಷಣ ಕೇವಲ ಸೇವೆಯಷ್ಟೇ ಅಲ್ಲದೇ ಆರ್ಥಿಕತೆಯೂ ಆಗಿರುವುದು ವಾಸ್ತವ.
ಶೈಕ್ಷಣಿಕ ನಗರಿ ಎಂದೇ ಹೆಸರಾಗಿರುವ ದಾವಣಗೆರೆಯ ಆರ್ಥಿಕತೆಯಲ್ಲಿ ಶಿಕ್ಷಣ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ. ಈಗಾಗಲೇ ಲಾಕ್ಡೌನ್ ಆರ್ಥಿಕತೆಯ ಹೊಡೆತಕ್ಕೆ ಸಿಲುಕಿರುವ ನಗರಕ್ಕೆ, ಒಂದು ವರ್ಷದ ಶೈಕ್ಷಣಿಕ ರಜೆ ಬಲು ದುಬಾರಿಯಾಗಿಯೂ ಪರಿಣಮಿಸಲಿದೆ.
ಬೇಕೋ ಬೇಡವೋ ರಾಜ್ಯದ ದೊಡ್ಡ ಪ್ರಮಾಣದ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳನ್ನು ಈಗಾಗಲೇ ಅವಲಂಬಿಸಿಯಾಗಿದೆ. ಅವುಗಳ ಮುಂದುವರಿ ಕೆಯೂ ಅನಿವಾರ್ಯವಾಗಿದೆ. ಏಕೆಂದರೆ ಈ ಶಾಲೆಗಳು ಮುಚ್ಚಿದರೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮೂಲಕವೇ ಶಿಕ್ಷಣ ನಿಭಾಯಿ ಸುವುದು ಸುಲಭದ ಮಾತಲ್ಲ. ಹೀಗಾಗಿ ಶೈಕ್ಷಣಿಕ ನಿರ್ಧಾರ ತೆಗೆದು ಕೊಳ್ಳುವಾಗ ಈ ವಿಷಯಗಳನ್ನು ಪರಿಗಣಿಸುವ ಅನಿವಾರ್ಯತೆ ಇದೆ.