ಜಗಳೂರಿನಲ್ಲಿ ಆದಿಜಾಂಬವ ಪೀಠದ ಶ್ರೀ ಷಡಕ್ಷರಿ ಮುನಿ ಅಭಿಮತ
ಜಗಳೂರು, ಫೆ.27- ಜಾತಿ ವ್ಯವಸ್ಥೆಯಲ್ಲಿ ಹಸಿವು, ಬಡತನ ಹೊಂದಿರುವವರಿಗೆ ಸಾಮಾಜಿಕ ವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯವಿದೆ. ಆದರೆ, ದಶಕಗಳಿಂದ ಆಡಳಿತ ಸರ್ಕಾರಗಳು ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ವೆಸಗಿವೆ ಎಂದು ಆದಿಜಾಂಬವ ಪೀಠದ ಶ್ರೀ ಷಡಕ್ಷರ ಮುನಿಗಳು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದಿಂದ ಹಮ್ಮಿಕೊಂಡಿದ್ದ ಗ್ರಾ.ಪಂ ನೂತನ ಸದಸ್ಯರುಗಳಿಗೆ ಅಭಿನಂದನೆ ಹಾಗೂ ಸದಾಶಿವ ಆಯೋಗ ಹೋರಾಟ ಸಮಿತಿ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾದಿಗ ಸಮುದಾಯದ 49 ಉಪಜಾತಿಗಳನ್ನೊಳಗೊಂಡು ಸಂಘಟಿತರಾಗಿ ಬೇಡಿಕೆಗಳನ್ನು ಒತ್ತಾಯಿಸಿ, ಅಸ್ಪೃಶ್ಯ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಬರುವ ಮಾರ್ಚ್ 25 ರಂದು ಹರಿಹರದ ಕೃಷ್ಣಪ್ಪ ಸ್ಮಾರಕ ಭವನದಿಂದ 300 ಕಿ.ಮೀ ಗಳ ದೂರ ಪಾದಯಾತ್ರೆ ಹಮ್ಮಿಕೊಂಡಿದ್ದು, ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ದಾರಿದ್ರ್ಯ, ಅಪಮಾನ, ಕಳಂಕ ತೊಲಗಿಸಲು ತಳಸಮುದಾಯಗಳಿಗೆ ಶಿಕ್ಷಣ ಅಗತ್ಯ. ಉತ್ಯಮ ಚಾರಿತ್ರ್ಯ ಮೈಗೂಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಗೌರವ ಲಭಿಸುವುದು. ಮಾದಿಗ ಸಮಾಜ ಅಜ್ಞಾನದ ಅಂಧಕಾರದಿಂದ ಹೊರಬಂದು ಶಿಕ್ಷಣ ಉದ್ಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಹೇಳಿದರು.
ಐಮಂಗಲದ ಶಿವಶರಣ ಹರಳಯ್ಯ ಮಾತನಾಡಿ, ಪಂಚಮರಿಗೆ ಸಂವಿಧಾನ ಬದ್ದ ಸವಲತ್ತುಗಳಿದ್ದರೂ ಅನ್ಯ ಸಮುದಾಯಗಳಿಗೆ ಸೋರಿಕೆಯಾಗುತ್ತಿವೆ. 9 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಮನ್ನಣೆ ದೊರೆತಿಲ್ಲ. ಅಧಿಕಾರ ಅನುಭವಿಸುತ್ತಿರುವ ಸಿರಿವಂತರೇ ಮೀಸಲಾತಿ ಹೋರಾಟ ನಡೆಸುತ್ತಿದ್ದರೆ, ಅಸ್ಪೃಶ್ಯರು ಜಾಗೃತರಾಗಬೇಕಿದೆ. ಸಹೋದರ ಸಮಾಜಗಳ ಮೀಸಲಾತಿ ಹೋರಾಟಕ್ಕೆ ವಿರೋಧವಿಲ್ಲ. ನಮಗೆ ಸಿಗಬೇಕಾದ ಮೀಸಲಾತಿ ಕಲ್ಪಿಸಿ ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ತಾಲ್ಲೂಕಿನ ಮಾದಿಗ ಸಮಾಜದ 47 ಜನ ಗ್ರಾ.ಪಂ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲಘಟಗಿ ಡೋಹರ ಪೀಠದ ಮಾತೆ ನಂದಾದೇವಿ, ನೌಕರರ ಸಂಘದ ಪ್ರಕಾಶ್, ರಾಜುಕೋಟಿ, ಮಾದಿಗ ಸಮಾಜದ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಹಟ್ಟಿ ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಓಬಣ್ಣ, ಹನುಮಂತಾಪುರ ತಿಪ್ಪೇಸ್ವಾಮಿ, ಚಂದ್ರಪ್ಪ , ಕುಬೇಂದ್ರಪ್ಪ, ಮಲೆಮಾಚಿಕೆರೆ ಸತೀಶ್, ಆನಂದ್ ಚದುರಗೊಳ್ಳ, ವಕೀಲ ಹನುಮಂತಪ್ಪ, ರೇಣುಕೇಶ್, ಗಿರೀಶ್, ವಿಜಯ್ ಕೆಂಚೋಳ್ ಮುಂತಾದವರು ಭಾಗವಹಿಸಿದ್ದರು.