ತರಳಬಾಳು ಹುಣ್ಣಿಮೆಯಲ್ಲಿ ರಾಜ್ಯಪಾಲ ಗೆಹ್ಲೋಟ್
ಕೊಟ್ಟೂರು, ಫೆ. 4 – ಭಾರತದ ಧಾರ್ಮಿಕ ಪರಂಪರೆಯು ಸರ್ವಧರ್ಮ ಸಮಭಾವ ಹಾಗೂ ವಸುದೈವ ಕುಟುಂಬಕಂ ತತ್ವದಿಂದ ಪ್ರೇರಿತವಾಗಿದೆ ಎಂದು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಎಂಟನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡಿದರು.
ಭಾರತದ ಧಾರ್ಮಿಕ ಪರಂಪರೆ ಅನಂತವಾಗಿ ಸಾಗಿ ಬಂದಿದೆ. ಸಾಧು, ಸಂತರು, ಆಚಾರ್ಯ, ಋಷಿ ಮುನಿಗಳು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಅಧ್ಯಾತ್ಮಿಕ ಮಾನಸಿಕತೆಗಾಗಿ ವಿಶ್ವದ ಹಲವರು ಭಾರತದ ಕಡೆ ನೋಡುತ್ತಿದ್ದಾರೆ. ವಿಶ್ವಕಲ್ಯಾಣ ಹಾಗೂ ವಿಶ್ವಶಾಂತಿಯು ಭಾರತದ ಋಷಿ ಮುನಿಗಳ ಸಿದ್ಧಾಂತದಿಂದ ಸಾಧ್ಯ ಎಂದು ಗೆಹ್ಲೋಟ್ ಹೇಳಿದರು.
ಸಿರಿಗೆರೆ ಮಠದದಲ್ಲಿ ಉತ್ಕೃಷ್ಟ ಮಲ್ಲಕಂಬ ಕ್ರೀಡಾಪಟುಗಳಿರುವುದನ್ನು ಇಂದು ನಾನು ನೋಡಿದೆ. ನನ್ನ ತವರೂರಾದ ಉಜ್ಜೈನಿಯಲ್ಲೂ ಮಲ್ಲಕಂಬದ ಉತ್ಕೃಷ್ಟ ಕ್ರೀಡಾಪಟುಗಳಿದ್ದಾರೆ. ಮಠದ ಕ್ರೀಡಾಪಟುಗಳು ತಮ್ಮ ಜಿಲ್ಲೆಗೆ ಭೇಟಿ ನೀಡಿ ಕಲಾ ಪ್ರದರ್ಶನ ಮಾಡಲಿ ಎಂದು ಇದೇ ವೇಳೆ ರಾಜ್ಯಪಾಲರು ಆಹ್ವಾನಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಭಾರತದಲ್ಲಿ ಧರ್ಮ ಕೇವಲ ಪೂಜಾ ಪದ್ಧತಿಯಲ್ಲ. ಅದು ಆಚರಣೆಯ ಹಾಗೂ ಜೀವನದ ಪದ್ಧತಿಯಾಗಿದೆ ಎಂದರು.
ಅನ್ಯ ಧರ್ಮಗಳಲ್ಲಿ ನಂಬಿಕೆಯೇ ಆಧಾರವಾಗಿದೆ. ಭಾರತೀಯ ಧರ್ಮ ಪರಂಪರೆಯಲ್ಲಿ ದೇವರು – ಧರ್ಮಗ್ರಂಥಗಳಲ್ಲಿ ನಂಬಿಕೆ ಇಡುವುದು ಮುಖ್ಯವಲ್ಲ. ದೇವರನ್ನು ನಂಬದ ಚಾರ್ವಾಕರನ್ನು ಋಷಿಯಾಗಿ ಸ್ವೀಕರಿಸಿದ್ದೇವೆ ಎಂದರು.
ಬಾಲ್ಯದಿಂದ ಹಿರಿಯರಾಗುವವರೆಗೆ, ರಾಜಕಾರಣದಿಂದ ರಾಜನವರೆಗೆ ಎಲ್ಲರಿಗೂ ಧಾರ್ಮಿಕ ನಿಯಮಗಳಿವೆ. ಮಾತೃ ಧರ್ಮ, ಪಿತೃ ಧರ್ಮ, ಆಚಾರ್ಯ ಧರ್ಮ, ರಾಜ ಧರ್ಮ… ಹೀಗೆ ಎಲ್ಲೆಡೆ ಹಾಗೂ ಎಲ್ಲರಲ್ಲೂ ಧರ್ಮ ಬೆಸೆದುಕೊಂಡಿದೆ ಎಂದು ಜೋಷಿ ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ತರಳಬಾಳು ಹುಣ್ಣಿಮೆ ಆಚರಿಸಿದ ಕಡೆಯಲ್ಲಿ ಒಂದಲ್ಲಾ ಒಂದು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಚನ್ನಗಿರಿಯ ಉಬ್ರಾಣಿ ಏತ ನೀರಾವರಿ, ರಾಜನಹಳ್ಳಿ ಏತ ನೀರಾವರಿ, ಜಗಳೂರು ಏತ ನೀರಾವರಿ, ಹಳೇಬೀಡು – ಬೇಲೂರು ಏತ ನೀರಾವರಿ, ಚಿತ್ರದುರ್ಗದ ಭರಮಸಾಗರ ಏತ ನೀರಾವರಿ ಯೋಜನೆಗಳು ಇದಕ್ಕೆ ಉದಾಹರಣೆ ಎಂದರು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮಾತನಾಡಿ, ಈಗಿರುವ ನ್ಯಾಯಪದ್ಧತಿಯ ಬಗ್ಗೆ ದೊಡ್ಡ ವಿಮರ್ಷೆಗಳು ನಡೆಯುತ್ತಿವೆ. ನ್ಯಾಯದಾನ ಪದ್ಧತಿಯು ತ್ವರಿತ, ಪರಿಣಾಮಕಾರಿ, ಸರಳ ಹಾಗೂ ಅಂತಿಮವಾಗಿರಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ಈ ನಾಲ್ಕು ಗುಣಗಳೂ ಸಿರಿಗೆರೆ ಮಠದಲ್ಲಿ ನಡೆಯುವ ನ್ಯಾಯಪೀಠದಲ್ಲಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಗದಗದ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಬೆಂಗಳೂರಿನ ವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಶಾಮನೂರು ಶಿವಶಂಕರಪ್ಪ, ಕ.ಸಾ.ಪ. ಅಧ್ಯಕ್ಷ ಡಾ. ಮಹೇಶ್ ಜೋಶಿ, ಶಾಸಕ ಎನ್.ವೈ. ಗೋಪಾಲಕೃಷ್ಣ, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.