ನೈತಿಕ ಶಿಕ್ಷಣದಿಂದ ಸ್ವಾವಲಂಬಿ ಮಾನಸಿಕತೆ

ನೈತಿಕ ಶಿಕ್ಷಣದಿಂದ ಸ್ವಾವಲಂಬಿ ಮಾನಸಿಕತೆ - Janathavaniಕೊಟ್ಟೂರು, ಫೆ. 2 – ಭಾರತವನ್ನು ಲೂಟಿ ಮಾಡಲು ಸ್ವಾವಲಂಬಿ ಗ್ರಾಮಗಳ ವ್ಯವಸ್ಥೆಯನ್ನು ಬ್ರಿಟಿಷರು ಬದಲಾಯಿಸಿದರು. ಮೆಕಾಲೆ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು. ಅದರ ಪರಿಣಾಮಗಳನ್ನು ಈಗ ನೋಡುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದಂದು ಆಯೋಜಿಸಲಾಗಿದ್ದ ಯುವ ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿರುವ ಬಗ್ಗೆ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದರು. ನೂತನ ಶಿಕ್ಷಣ ನೀತಿಯಲ್ಲಿ ಈ ಆಶಯ ಜಾರಿಗೆ ಬರುತ್ತಿದೆ. ಮಕ್ಕಳಿಗೆ ಮೌಲ್ಯಾಧರಿತ ಹಾಗೂ ನೈತಿಕ ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿ ಮಾನಸಿಕತೆ ತರುವ ಶಿಕ್ಷಣ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದವರು ಹೇಳಿದರು.

ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರುತ್ತೇವೆ. ಯುವಕರಿಗೆ ಪ್ರೇರಣೆ ಕೊಟ್ಟು ಸಮಾಜವನ್ನು ಪ್ರೀತಿಸುವ ಯುವಕರನ್ನಾಗಿ ಮಾಡುವ ಶಿಕ್ಷಣ ತರಲಾಗುವುದು ಎಂದವರು ತಿಳಿಸಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮನಸ್ಸು ಕೆಟ್ಟರೆ ಎಷ್ಟೇ ಉತ್ತಮ ದೇಹವಿದ್ದರೂ ಕೆಲಸಕ್ಕೆ ಬಾರದು. ದೇಹವನ್ನು ಸರಿಯಾಗಿ ಬಳಸಲು ಮನಸ್ಸು ಮೊದಲು ಸರಿ ಇರಬೇಕು. ಮನಸ್ಸನ್ನು ಪಳಗಿಸಿಕೊಳ್ಳುವ ಕಲೆ ಗೊತ್ತಾದಾಗ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು  ಹೇಳಿದರು.

ವಿಜ್ಞಾನ ಎಷ್ಟೇ ಬೆಳೆದರೂ ಮನುಷ್ಯನ ಹೃದಯ ದಲ್ಲಿನ ಕುತ್ಸಿತ ಮಲಿನ ಭಾವವನ್ನು ಬದಲಿಸಲು ಸಾಧ್ಯ ವಿಲ್ಲ. ಇದು ಬದಲಾಗಬೇಕಾದರೆ ಆಂತರ್ಯದಲ್ಲಿನ ದಿವ್ಯತೆಯ ಅರಿವಾಗಬೇಕು. ದಿವ್ಯತೆಯ ಅರಿವಾದವರು ತಮ್ಮ ಬದುಕಿನ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ ಎಂದವರು ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಈ ಹಿಂದೆ ಸಂಪರ್ಕ ತಂತ್ರಜ್ಞಾನ ಇರಲಿಲ್ಲ. ಆದರೆ, ಸಂಬಂಧಗಳು ಗಟ್ಟಿಯಾಗಿದ್ದವು. ಈ ವಾಟ್ಸಾಪ್ ಯುಗದಲ್ಲಿ ಸಂಪರ್ಕ ತಂತ್ರಜ್ಞಾನ ಬೆಳಿದಿದೆ. ಆದರೆ, ಆತ್ಮೀಯತೆ ಮರೆತಿದ್ದೇವೆ. ಕುಟುಂಬಗಳಲ್ಲೇ ಮಾತುಕತೆ ಕಡಿಮೆಯಾಗಿದೆ ಎಂದು ವಿಷಾದಿಸಿದರು.

ವಸುದೈವ ಕುಟಂಬಕಂ ಎಂಬ ಶ್ರೇಷ್ಠ ಸಂದೇಶದಿಂದ ಇಡೀ ವಿಶ್ವವೇ ಕುಟುಂಬ ಎನ್ನುತ್ತೇವೆ. ಆದರೆ, ಕುಟುಂಬದಲ್ಲೇ ಸಂತೋಷವನ್ನು ಕಾಣುತ್ತಿಲ್ಲ. ಕುಟುಂಬದವರ ಜೊತೆ ಮಾತನಾಡುವುದನ್ನೇ ಮರೆತಿದ್ದೇವೆ. ಹೆತ್ತ ತಾಯಿಯ ಜೊತೆ ಮಾತನಾಡುವುದನ್ನು ಮರೆತಿದ್ದೇವೆ. ಸಮಾಜ ಸರಿ ದಿಕ್ಕಿಗೆ ಸಾಗಬೇಕಾದರೆ ಕುಟುಂಬಗಳಲ್ಲಿನ ಸಂಬಂಧಗಳು ಬಲವಾಗಬೇಕು ಎಂದರು.

error: Content is protected !!