ದ್ರಾವಿಡ ಭಾಷೆಗಳು ಹಳೆಗನ್ನಡ ಅರಿಯಲು ಉಪಯುಕ್ತ

ಮದ್ರಾಸ್ ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥೆ ತಮಿಳ್ ಸೆಲ್ವಿ

ಕೊಟ್ಟೂರು, ಫೆ. 1 – ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ದ್ರಾವಿಡ ಭಾಷೆಗಳು ಒಂದೇ ವರ್ಗದಿಂದ ಬಂದಿವೆ. ಹೀಗಾಗಿ ಹಳೆಗನ್ನಡ ತಿಳಿಯಲು ಇತರೆ ದ್ರಾವಿಡ ಭಾಷೆಗಳು ನೆರವಾಗುತ್ತವೆ ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ತಮಿಳ್ ಸೆಲ್ವಿ ಹೇಳಿದರು.

ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಳೆಗನ್ನಡದಲ್ಲಿ ಬಳಕೆಯಾದ ಎಷ್ಟೋ ಪದಗಳು ನಂತರದಲ್ಲಿ  ಕಣ್ಮರೆಯಾಗಿವೆ. ಆದರೆ, ತಮಿಳು ಇಲ್ಲವೇ ತೆಲುಗಿನಲ್ಲಿ ಅದೇ ಪದಗಳು ಮುಂದುವರೆದಿವೆ. ಅದೇ ರೀತಿ ತಮಿಳುನಾಡಿನಲ್ಲಿ ಬಳಕೆಯಾಗದೇ ನಿಂತ ಪದಗಳು ಕರ್ನಾಟಕದಲ್ಲಿ ಬಳಕೆಯಾಗುತ್ತಿರುವ ಸಾಧ್ಯತೆ ಇದೆ ಎಂದರು.

 ಶ್ರೀಕೃಷ್ಣನನ್ನು ಭೇಟಿ ಮಾಡಲು ಬಂದಾಗ ಅರ್ಜುನನು ‘ಸೆರಪುಗೈದನ್ ಅನಂತಂ’ ಎಂದು ಹೇಳಿದ ಎಂಬ ಮಾತು ಪಂಪ ಭಾರತದಲ್ಲಿ ಬರುತ್ತದೆ. ಆದರೆ, ‘ಸೆರಪು’ ಎಂಬ ಪದದ ಅರ್ಥವೇನು ಎಂಬುದು ಸ್ಪಷ್ಟವಾಗಿರಲಿಲ್ಲ. 

ಕನ್ನಡದ ಕಣ್ವ ಎಂದೇ ಹೆಸರಾದ ಬಿ.ಎಂ. ಶ್ರೀಕಂಠಯ್ಯ ಅವರಿಗೆ ತಮಿಳೂ ತಿಳಿದಿತ್ತು. ತಮಿಳಿನಲ್ಲಿ ‘ಸೆರಪು’ ಎಂಬ ಪದಕ್ಕೆ ವಿಶೇಷವಾದ ಸಮಾರಂಭ – ಔತಣ ಕೂಟ ಎಂಬ ಅರ್ಥ ಬರುತ್ತದೆ. ಇದೇ ಪದವೇ ಹಳೆಗನ್ನಡದಲ್ಲಿ ಬಳಕೆಯಾಗಿದೆ ಎಂದು ಶ್ರೀಕಂಠಯ್ಯ ಕಂಡುಕೊಂಡರು. ಅರ್ಜುನನಿಗೆ ಶ್ರೀಕೃಷ್ಣ ಔತಣಕೂಟ ಆಯೋಜಿಸಿದ ಎಂಬುದು ‘ಸೆರಪುಗೈದನ್ ಅನಂತಂ’ ಎಂಬ ಪದದ ಅರ್ಥ ಎಂದು ಸೆಲ್ವಿ ಹೇಳಿದರು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಕನ್ನಡದ ಹಲವಾರು ಪದಗಳನ್ನು ನಾವು ತಪ್ಪು ಅರ್ಥದಲ್ಲಿ ಬಳಸುತ್ತೇವೆ.  ದಿನಬಳಕೆಯಲ್ಲಿ ಬರುವ ಪದಗಳೂ ತಪ್ಪಾಗಿ ಪ್ರಚಲಿತವಾಗಿವೆ. ಈ ತಪ್ಪು ಬಳಕೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.

ಅಂತಹ ತಪ್ಪು ಬಳಕೆಯ ಪದಗಳಲ್ಲಿ ಮುಂಡ ಎಂಬುದೂ ಸೇರಿದೆ. ರುಂಡ ಎಂದರೆ ಕುತ್ತಿಗೆ, ಮುಂಡ ಎಂದರೆ ಕುತ್ತಿಗೆಯ ತಳಭಾಗ ಎಂಬುದು ತಪ್ಪು ಕಲ್ಪನೆ. ಮುಂಡ ಎಂದರೆ ಹಣೆ ಎಂದರ್ಥ.  ಮುಂಡ ಮೋಚು ಎಂದರೆ ತಲೆ ಬೋಳಿಸು ಎಂಬ ಅರ್ಥ ಬರುವುದನ್ನು ಗಮನಿಸಬೇಕಿದೆ ಎಂದರು.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ಸಾಹಿತಿ ನಾಡೋಜ ದೊಡ್ಡರಂಗೇಗೌಡ, ಚುಟುಕು ಹಾಸ್ಯ ಸಾಹಿತಿ ಡುಂಡಿರಾಜ್, ಹೊಸಪೇಟೆಯ ಬಸವ ಪಥ ಪತ್ರಿಕೆಯ ಸಂಪಾದಕ ಮೃತ್ಯುಂಜಯ ರುಮಾಲೆ, ಕಲಬುರಗಿಯ ಹಾಸ್ಯ ಭಾಷಣಕಾರರಾದ ಇಂದುಮತಿ ಸಾಲಿಮಠ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲತಾ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!