ಕೊಟ್ಟೂರು, ಜ. 31 – ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪ್ರಾಯೋಗಿಕ ಮನೋಭಾವದವರು. ಯಾವ ಯೋಜನೆ ಕಾರ್ಯಸಾಧುವೋ ಅವುಗಳ ಬಗ್ಗೆ ಮಾತ್ರ ನಮಗೆ ಸೂಚನೆ ನೀಡುತ್ತಾರೆ. ಅಷ್ಟೇ ಅಲ್ಲದೇ, ಯೋಜನೆ ಕಾರ್ಯಗತ ಮಾಡಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆಯ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಹುಣ್ಣಿಮೆ ಕಾರ್ಯಕ್ರಮ ಒಂದು ರೀತಿ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸುವ ವಿಧಾನಸಭಾ ಅಧಿವೇಶನ ಇದ್ದಂತೆ ಎಂದು ಹೇಳಿದರು.
ಮೂರು ಅಂಜಿಕೆ ಇರಲಿ
ಸಮಾಜದ ಜನರು ಅದರಲ್ಲೂ ಯುವಕರಿಗೆ ಮೂರು ರೀತಿಯ ಭಯ ಇರಬೇಕು. ಸಮಾಜ, ಕಾನೂನು ಹಾಗೂ ಆತ್ಮಸಾಕ್ಷಿಯ ಭಯದಿಂದ ನಡೆಯಬೇಕು ಎಂದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕಾಳಾಪುರದ ಘಟನೆಯನ್ನು ಪ್ರಸ್ತಾಪಿಸಿದ ಶ್ರೀಗಳು, ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು. ಆವೇಶದ ಕೈಯ್ಯಲ್ಲಿ ಬುದ್ಧಿ ಕೊಡಬಾರದು ಎಂದವರು ಹೇಳಿದರು.
ಕಾಳಾಪುರದ ಎಲ್ಲ ಸಮುದಾಯಗಳ ಗ್ರಾಮಸ್ಥರು ತರಳಬಾಳು ಹುಣ್ಣಿಮೆಗೆ ಬರಬೇಕು. ನಿಮಗೆ ಆಗಿರುವ ನಷ್ಟ ಹಾಗೂ ಅನ್ಯಾಯ ಸರಿಪಡಿಸುವುದು ನಮ್ಮ ಧರ್ಮ ಎಂದು ಸ್ವಾಮೀಜಿ ಕರೆ ನೀಡಿದರು.
ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಚನ್ನಗಿರಿಯ ಏತ ನೀರಾವರಿ ಯೋಜನೆ ಕುರಿತು ಶ್ರೀಗಳು ನನಗೆ ಮಾರ್ಗದರ್ಶನ ಮಾಡಿದ್ದರು. ಯೋಜನೆಗೆ ಸಂಪುಟದಲ್ಲಿ ತ್ವರಿತವಾಗಿ ಅನುಮೋದನೆ ಪಡೆದಾಗ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು ಎಂದರು.
ಶಾಸಕ ಕರುಣಾಕರ ರೆಡ್ಡಿ ಮಾತನಾಡಿ, ಹರಪನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಎಲ್ಲಾ ರೀತಿಯಲ್ಲು ಸಿದ್ಧವಾಗಿದೆ. ಇನ್ನೊಂದು ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ. ಇದರಿಂದ ತಾಲ್ಲೂಕಿನ ರೈತರಿಗೆ ನೆಮ್ಮದಿ ಸಿಗಲಿದೆ ಎಂದರು.
ದಾವಣಗೆರೆಯ ತರಳಬಾಳು ಕೃಷಿ ಕೇಂದ್ರದ ವಿಜ್ಞಾನಿ ಎಂ.ಜಿ. ಬಸವನಗೌಡ ಮಾತನಾಡಿ, ರೈತರ ಆದಾಯ ಹೆಚ್ಚಳವಾಗಲು ಸಮಗ್ರ ಕೃಷಿ ಪದ್ಧತಿ ಬೇಕು. ಇದರಿಂದ ಸಣ್ಣ ರೈತರಿಗೆ ವಿಕೋಪಗಳ ಸಂದರ್ಭದಲ್ಲಿ ಹೆಚ್ಚು ಭದ್ರತೆ ಸಿಗುತ್ತದೆ. ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆಯಬೇಕಿದೆ ಎಂದರು. ಕೃಷಿಗೆ ಪೂರಕವಾದ ಉಪಕಸುಬುಗಳ ಅಗತ್ಯವೂ ಇದೆ ಎಂದರು.
ಉಪ ಕಸುಬು ಮರೆತ ಕಾರಣದಿಂದ ಆದಾಯ ಕಡಿಮೆಯಾಗಿದೆ. ಪಶು ಸಂಗೋಪನೆ ಪ್ರಮುಖ ಉಪ ಕಸುಬಾಗಿದೆ. ಇದರ ಜೊತೆಗೆ ಜೇನು ಸಾಕಾಣಿಕೆಯೂ ಪ್ರಯೋಜನಕಾರಿ ಎಂದು ತಿಳಿಸಿದರು.