ಸಾಂಸ್ಥೀಕರಣಗೊಳಿಸುವ ಉದ್ದೇಶ ಶಿವಶರಣರಿಗೆ ಇರಲಿಲ್ಲ

ಸಾಂಸ್ಥೀಕರಣಗೊಳಿಸುವ ಉದ್ದೇಶ ಶಿವಶರಣರಿಗೆ ಇರಲಿಲ್ಲ - Janathavaniಮತ್ತೆ ಕಲ್ಯಾಣ ಉಪನ್ಯಾಸಕ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀಗಳು

ಸಾಣೇಹಳ್ಳಿ, ಆ.19- ಧರ್ಮವನ್ನು ಸಾಂಸ್ಥೀಕರಣಗೊಳಿಸುವ ಉದ್ದೇಶ ಬಸವಾದಿ ಶಿವಶರಣರಿಗೆ ಇರಲಿಲ್ಲ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.

ಅವರು ಶ್ರೀಮಠದಿಂದ ಆಯೋಜನೆಗೊಂಡಿರುವ ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

15ನೇ ಶತಮಾನದಲ್ಲಿ ಪ್ರಾರಂಭವಾದ ವಿರಕ್ತ ಪರಂಪರೆ ತೋಂಟದ ಸಿದ್ಧಲಿಂಗ ಯತಿಗಳ ಮುಂದಾಳುತನದಲ್ಲಿ ವಚನ ಸಾಹಿತ್ಯ ಸಂಗ್ರಹಿಸಿ ದಾಖಲೀಕರಣ ಮಾಡುವ ಕಾರ್ಯವನ್ನು ತುಂಬಾ ವ್ಯವಸ್ಥಿತವಾಗಿ ಮಾಡಲಾಯಿತು. ಅಂದು ರಾಜಕೀಯ ಮತ್ತು ಧಾರ್ಮಿಕ ಬೆಳವಣಿಗೆಯಲ್ಲಿ ಅನ್ಯ ಧರ್ಮಗಳ ಪ್ರಭಾವವೂ ಇತ್ತು. ಅವರು ತಮ್ಮ ಧರ್ಮವನ್ನು ಸಾಂಸ್ಥಿಕವಾಗಿ ಮಾಡಿಕೊಂಡು ಅದರ ಮೂಲಕ ತಮ್ಮ ಅಧಿಕಾರವನ್ನು ಭದ್ರಪಡಿಸುವ ಹುನ್ನಾರ ನಡೆಸಿರಬೇಕು. ಅದು ಕಾರಣವಾಗಿಯೇ ಬಸವಾದಿ ಶಿವಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ಸಾಂಸ್ಥಿಕ ಧರ್ಮವನ್ನಾಗಿ ಮಾಡುವ ಆಲೋಚನೆ ವಿರಕ್ತ ಪರಂಪರೆಯವರಿಗೆ ಬಂದಿರಬೇಕು ಎಂದು ಅಭಿಪ್ರಾಯಪಟ್ಟರು.

ಅವರ ಆಶಯದಲ್ಲಿ ತಪ್ಪಿದೆ ಎನ್ನಲಾಗುವುದಿಲ್ಲ. ಏಕೆಂದರೆ ಒಂದು ಧರ್ಮ ಸಾಂಸ್ಥಿಕವಾಗದಿದ್ದರೆ ಉಳಿಯುವುದಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಹಾಗಾಗಿ ಮಾಡುವ ಚಿಂತನೆ ಅವರದಾಗಿರಬೇಕು.  ಆ ಗ್ರಹಿಕೆಯಿಂದಲೇ ಅವರು ವಚನ ಸಂಗ್ರಹ ಕಾರ್ಯ ಮಾಡಿರಬೇಕು. ವಚನಗಳ ಸಾರವನ್ನು ಪುರಾಣ, ಕಾವ್ಯ ಮತ್ತಿತರ ಪ್ರಾಕಾರಗಳಲ್ಲೂ ಪ್ರತಿಪಾದಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ ಎಂದರು.

ವಿರಕ್ತರು ವಚನ ಸಾಹಿತ್ಯಕ್ಕೆ ಅಪಾರ ಕಾಣಿಕೆ ಕೊಟ್ಟಿದ್ದರೂ ಹಲವು ಪಠ್ಯಗಳ ನಡುವೆ ಒಂದು ರೀತಿಯ ಗೊಂದಲ ನಿರ್ಮಾಣ ಮಾಡಿದರೇನೋ ಅನಿಸುವುದು. ಅವರು ಏನೇ ಮಾಡಿರಲಿ. 12ನೇ ಶತಮಾನದ ವಚನಕಾರರ ಧಾರ್ಮಿಕ, ವೈಚಾರಿಕ ನೆಲೆಯಲ್ಲಿ ನಿಜವಾದ ಪಠ್ಯ ಯಾವುದು ಎಂದು ಅನುಭಾವಿಗಳು ಮತ್ತು ಸಂಶೋಧಕರು ಹೆಕ್ಕಿ ತೆಗೆಯಬೇಕಾಗಿದೆ. ವಿರಕ್ತರು ವಚನ ಸಂಪಾದನೆಯ ಕಾರ್ಯ ಮಾಡಿದ್ದು ಸ್ಮರಣೀಯವಾದರೂ ತಮಗೆ ಬೇಕಾದ ಆಚರಣೆ, ಧಾರ್ಮಿಕ ನಂಬಿಕೆಗಳನ್ನು ವಚನಗಳಲ್ಲಿ ತುರುಕುವ ಪ್ರಯತ್ನವನ್ನೂ ಮಾಡಿರುವುದು ವಿಷಾದನೀಯ ಎಂದರು.

ಬೆಂಗಳೂರು ಬೇಲಿ ಮಠದ ಪೀಠಾಧ್ಯಕ್ಷ ಶ್ರೀ ಶಿವರುದ್ರ ಮಹಾಸ್ವಾಮಿಗಳು ವಚನ ಸಾಹಿತ್ಯ ಮತ್ತು ನೂರೊಂದು ವಿರಕ್ತರು ವಿಷಯ ಕುರಿತು ಮಾತನಾಡಿ, ನೂರೊಂದು ವಿರಕ್ತರು ಒಂದೇ ಕಡೆ  ಇದ್ದವರಲ್ಲ. ಅವರೆಲ್ಲ ಬಸವ ಪಂಥಕ್ಕೆ ಆಕರ್ಷಿತರಾಗಿ ಬಂದವರಷ್ಟೇ ಅಲ್ಲ. ತಮ್ಮ ಮೂಲ ನೆಲೆಯ ಚಿಂತನೆಗಳನ್ನು ಮಿಶ್ರಣ ಮಾಡಿಕೊಂಡು ವಿಶಿಷ್ಟವಾದ ರೀತಿಯಲ್ಲಿ ಆಲೋಚನೆಗಳನ್ನು, ಯೋಜನೆಗಳನ್ನು ಗೈದವರು. 1584 ರಲ್ಲಿ ವಿರೂಪಾಕ್ಷ ಪಂಡಿತರ ಚನ್ನಬಸವೇಶ ಪುರಾಣ ದಲ್ಲಿ ಮಾತ್ರ ನೂರೊಂದು ವಿರಕ್ತರ ಹೆಸರುಗಳು ಉಲ್ಲೇಖಗೊಂಡಿವೆ. ಇದನ್ನೇ ಮುಂದುವರಿದ ಸಾಹಿತಿಗಳು ಯಾವ ವಿಚಾರ ವಿಮರ್ಶೆ ಇಲ್ಲದೆ, ಚಿಂತನೆಯಿಲ್ಲದೆ ಉಲ್ಲೇಖ ಮಾಡುತ್ತಾ ಬಂದಿದ್ದಾರೆ ಎಂದರು.

ನೂರೊಂದು ವಿರಕ್ತರು ಬಸವ ದ್ವೇಷಿಗಳಲ್ಲ. ಆದರೆ ವಚನಗಳ ಅಧ್ಯಯನ, ತತ್ವಗಳನ್ನು ಸಂಪೂರ್ಣವಾಗಿ ತಿಳಿದು, ಅನುಷ್ಠಾನಕ್ಕೆ ತಂದವರಲ್ಲ. ಕೇವಲ ಭಕ್ತಿ ಆವೇಶದಲ್ಲಿ ಅವರು ಮುಂದುವರೆದಿದ್ದರು. ಶೈವ ಪಂಥಗಳಾದ ಕಾಳಾಮುಖ, ಲಾಕುಲೀಶ, ನಾಥಪಂಥ ಮೊದಲಾದವರು ತಮ್ಮ ಮೂಲ ನೆಲೆಯನ್ನು ಬಿಟ್ಟು ಹೊಸ ವೀರಶೈವ ಹೆಸರಿನಿಂದ ಕರೆಯಲ್ಪಟ್ಟಿತು. ನಾಲ್ಕು ದಿಕ್ಕಿನಲ್ಲಿ ಇದ್ದತಂಹ ಧಾರ್ಮಿಕ ಚಿಂತನೆಗಳ ಪ್ರವಾಹಗಳು ಒಂದೆಡೆ ನೆಲೆಗೊಂಡಾಗ ವೀರಶೈವ ಸೃಷ್ಟಿಯಾಯಿತು ಎಂದರು.

ಬೆಂಗಳೂರಿನ ಪತ್ರಕರ್ತ ರುದ್ರೇಶ್ ಅಂದರಗಿ ಸ್ವಾಗತಿಸಿದರು. ದಾವಣಗೆರೆ ಗೌಡರ ಇಂದ್ರಪ್ಪ ದಂಪತಿಗಳು ಕಾರ್ಯಕ್ರಮದ ದಾಸೋಹಿಗಳಾಗಿದ್ದರು.

error: Content is protected !!