ಶಾಲಾ ಶಿಕ್ಷಕರ ಸಂಘದ ಚುನಾವಣೆ : ಅಧಿಕ ಮತದಾನ

ದಾವಣಗೆರೆ, ಡಿ.16- ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಚುನಾವಣೆಯು ನಗರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಮಂಗಳವಾರ ಶಾಂತಿಯುತವಾಗಿ ನಡೆಯಿತು.

ಸಂಘದ 90 ಸ್ಥಾನಗಳಿಗೆ 207 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಒಟ್ಟು 4355 ಮತದಾರರಿದ್ದು, ಜಿಲ್ಲಾದ್ಯಂತ ಸರಾಸರಿ ಶೇ.90ಕ್ಕಿಂತಲೂ ಅಧಿಕ ಮತದಾನವಾಗಿದೆ. 

ದಾವಣಗೆರೆ ದಕ್ಷಿಣ ವಲಯದ ಶಿಕ್ಷಕ-ಶಿಕ್ಷಕಿಯರು ಇಲ್ಲಿನ ಹೈಸ್ಕೂಲ್ ಮೈದಾನದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಉತ್ತರ ವಲಯದ ಶಿಕ್ಷಕ-ಶಿಕ್ಷಕಿಯರು ನಗರದ ಎಕ್ಸ್ ಮುನ್ಸಿಪಲ್‌ ಶಾಲೆಯ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿದರು. ಆಯಾ ತಾಲ್ಲೂಕುಗಳ ಮತದಾರರಾದ ಸರ್ಕಾರಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ನಿಗದಿತ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅತೀ ಹೆಚ್ಚು ಮತದಾನ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಲ್ಲಾಗಿದೆ. ದಾವಣಗೆರೆ ಉತ್ತರ ವಲಯದಲ್ಲಿ ಅತೀ ಕಡಿಮೆ ಮತದಾನವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಉತ್ತರ ವಲಯದ 14 ಸ್ಥಾನಗಳಿಗೆ 40 ಅಭ್ಯರ್ಥಿ ಗಳು ಸ್ಪರ್ಧಿಸಿದ್ದು, 686 ಮತದಾರರ ಪೈಕಿ ಶೇ.95ರಷ್ಟು ಮತದಾನವಾಗಿದೆ. ದಕ್ಷಿಣ ವಲಯದ 13 ಸ್ಥಾನಕ್ಕೆ 33 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 644 ಮತದಾರರ ಪೈಕಿ ಶೇ.98ರಷ್ಟು ಹಕ್ಕು ಚಲಾಯಿಸಲಾಗಿದೆ. ಜಗಳೂರು ತಾಲ್ಲೂಕಿನ 13 ಸ್ಥಾನಕ್ಕೆ 26 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 633 ಮತದಾರರ ಪೈಕಿ ಶೇ.98ರಷ್ಟು ಮತ ಚಲಾವಣೆ ಯಾಗಿದೆ. ಹರಿಹರದ 14 ಸ್ಥಾನಕ್ಕೆ 31 ಜನ ಸ್ಪರ್ಧಿಸಿದ್ದು, 709 ಮತದಾರರ ಪೈಕಿ ಶೇ.92 ಮತದಾನವಾಗಿದೆ.

ಹೊನ್ನಾಳಿಯ 9 ಸ್ಥಾನಗಳಿಗೆ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 469 ಮತದಾರರ ಪೈಕಿ ಶೇ.98 ಮತದಾನವಾಗಿದೆ. ನ್ಯಾಮತಿಯ 6 ಸ್ಥಾನಗಳಿಗೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 285 ಮತದಾರರ ಪೈಕಿ ಶೇ.98 ಮತ ಚಲಾವಣೆಯಾಗಿವೆ. ಚನ್ನಗಿರಿಯ 21 ಸ್ಥಾನಗಳ ಪೈಕಿ 44 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 929 ಮತದಾರರಲ್ಲಿ ಶೇ.92 ಮತ ಚಲಾವಣೆಯಾಗಿವೆ. 

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಉಮೇಶ್, ಅಧ್ಯಕ್ಷ ಬಿ. ಪಾಲಾಕ್ಷ, ಕಾರ್ಯದರ್ಶಿ ಮಂಜುನಾಥ, ಖಜಾಂಚಿ ಕಲ್ಲೇಶಪ್ಪ, ರಾಜ್ಯ ಪರಿಷತ್ ಸದಸ್ಯ ಸಿದ್ದಲಿಂಗಸ್ವಾಮಿ, ಬಿ. ಶಿವಣ್ಣ, ಎನ್. ಮಾರುತಿ, ಪುನೀತ್ ಶಂಕರ್, ಮಲ್ಲಿಕಾರ್ಜುನ ಸ್ವಾಮಿ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಬಿಇಓ ಬಿ.ಸಿ. ಸಿದ್ದಪ್ಪ, ಕೊಟ್ರೇಶ್ ಸೇರಿದಂತೆ ಇತರರು ಹಾಜರಿದ್ದರು.

error: Content is protected !!