ಆಕಾಶದಲ್ಲಿ ಉಲ್ಕೆಗಳ ಸುರಿಮಳೆ

ದಾವಣಗೆರೆ, ಡಿ. 12 – ನಾಳೆ ದಿನಾಂಕ 13 ಮತ್ತು 14 ರಂದು ರಾತ್ರಿ ಆಗಾಗ್ಗೆ 10 ರಿಂದ 200 ಸಂಖ್ಯೆಯ ಜೇಮಿನಿಡ್ ಉಲ್ಕೆಗಳು ನಮಗೆ ಬರಿಗಣ್ಣಿಗೆ ಗೋಚರಿಸುವ ಮೂಲಕ ಆಕಾಶದಲ್ಲಿ ಉಲ್ಕಾವೃಷ್ಟಿಯೇ ಸಂಭವಿಸಲಿದೆ. ಪ್ರತಿ ನಿಮಿಷಕ್ಕೊಮ್ಮೆ ಭೂಮಿಯ ಕಡೆಗೆ ಬೀಳುವ ಉಲ್ಕೆಗಳನ್ನು ಕಣ್ಣಾರೆ ಕಂಡು ಆನಂದಿಸಬಹುದು  ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.   

ನಭೋಮಂಡಲದಲ್ಲಿ ಇಂತಹ ವಿಸ್ಮಯಗಳು ಘಟಿಸುತ್ತಲೇ ಇರುತ್ತವೆ. ನಮ್ಮ ಸೌರವ್ಯೂಹದಲ್ಲಿಯೇ ಇರುವ ಧೂಮಕೇತುಗಳು ಸೂರ್ಯನ ಹತ್ತಿರ ಹೋಗುತ್ತಿದ್ದಂತೆ ಸುಟ್ಟು ಹೋಗುತ್ತವೆ. ಅಲ್ಲಿಯೇ ಉಳಿಯುವ ಅವಶೇಷಗಳು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವಾಗ ಉಲ್ಕೆಗಳಾಗಿ ಭೂಮಿಯ ವಾತಾವರಣದಲ್ಲಿ ಆಗಾಗ್ಗೆ ಬಂದು ಬೀಳುತ್ತವೆ. ಈ ಉಲ್ಕಾವೃಷ್ಟಿಯು ಹೆಚ್ಚಾಗಿರುವುದರಿಂದ ನೋಡಲು ಇದೊಂದು ಕುತೂಹಲಕಾರಿಯಾಗಿದೆ. 

ಇದೇ 13 ಮತ್ತು 14 ರಂದು ರಾತ್ರಿ  9 ಗಂಟೆಯ ಹೊತ್ತಿಗೆ ಪೂರ್ವದ ದಿಗಂತದಲ್ಲಿ ಮಿಥುನ ರಾಶಿಯು ಕಾಣಿಸುತ್ತದೆ. ಈ ರಾಶಿಯ ಸ್ವಲ್ಪ ಮೇಲ್ಭಾಗದಲ್ಲಿ ಕಾಣಿಸುವ ಪಂಚಭುಜಾಕೃತಿಯ ವಿಜಯಸಾರಥಿ ನಕ್ಷತ್ರಪುಂಜದ ಆಜುಬಾಜಿನಲ್ಲಿ ನೂರಾರು ಉಲ್ಕೆಗಳು ಮಳೆಗರೆಯುವುದನ್ನು ಬರಿಗಣ್ಣಿನಲ್ಲಿಯೇ ನೋಡಬಹುದಾಗಿದೆ. 

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೋಡಲು ರಾತ್ರಿ 1 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ಸಮಯ ತುಂಬಾ ಸೂಕ್ತ. ಈ ಸಮಯದಲ್ಲಿ  ವಿಜಯಸಾರಥಿ ನಕ್ಷತ್ರಪುಂಜವು ದಿಗಂತದಿಂದ ಮೇಲಿರುವುದರಿಂದ ಮಿಥುನ ರಾಶಿಯ ಕಡೆಯಿಂದ ಉಲ್ಕೆಗಳು ಮಳೆಯ ರೂಪದಲ್ಲಿ ಭೂಮಿಯ ಕಡೆಗೆ ಬೀಳುವ ದೃಶ್ಯ ನಮ್ಮನ್ನು ರೋಮಾಂಚನ ಉಂಟುಮಾಡುತ್ತದೆ. ಈ ವಿಸ್ಮಯವನ್ನು ವೀಕ್ಷಿಸಲು ಮರೆಯಬೇಡಿ ಎಂದು ಸ್ವಾಮಿ ತಿಳಿಸಿದ್ದಾರೆ.

error: Content is protected !!