ಡಾ. ಬಿ.ಆರ್.ಅಂಬೇಡ್ಕರ್ ನೂತನ ಪುತ್ಥಳಿ ನಿರ್ಮಿಸಲು 50 ಲಕ್ಷ ರೂ. ಬಿಡುಗಡೆ ಮಾಡಬೇಕು.
ಒನಕೆ ಓಬವ್ವನ ಇತಿಹಾಸ, ಸಾಧನೆಗಳು ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಸರ್ಕಾರದಿಂದಲೇ ಓಬ್ಬವ್ವನ ಜಯಂತಿ ಆಚರಿಸಬೇಕು.
ದಾವಣಗೆರೆ, ಡಿ.6- ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಪುತ್ಥಳಿ ನಿರ್ಮಿಸಬೇಕು ಹಾಗೂ ಅದಕ್ಕಾಗಿ 50 ಲಕ್ಷ ರು. ಬಿಡುಗಡೆ ಮಾಡುವಂತೆ ಜಿಲ್ಲಾ ಛಲವಾದಿ ಮಹಾಸಭಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಅಂಬೇಡ್ಕರ್ ಪುತ್ಥಳಿಯನ್ನು ನವೀನ ರೀತಿಯಲ್ಲಿ ನಿರ್ಮಿಸಲು 50 ಲಕ್ಷ ರು. ಬಿಡುಗಡೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೋಕಸಭಾ ಸದಸ್ಯರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಗಿದೆ. ನಗರ ಪಾಲಿಕೆಗೂ ಮನವಿ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಾಸಭಾದ ಅಧ್ಯಕ್ಷ ಎಸ್. ಶೇಖರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ನಮ್ಮ ಸಮಾಜದ ಇಬ್ಬರು ಸಂಸದರಾಗಿದ್ದು, ನಾಲ್ವರು ಶಾಸಕರಾಗಿದ್ದಾರೆ. ಹಾವೇರಿ ಕ್ಷೇತ್ರದಲ್ಲಿ ಸಮಾಜದವರೇ ಆದ ನೆಹರೂ ಓಲೇಕಾರ್ ಸತತ ವಾಗಿ ಮೂರು ಬಾರಿ ಆಯ್ಕೆ ಯಾಗಿದ್ದು, ಸಚಿವ ಸ್ಥಾನದ ಅರ್ಹತೆ ಮತ್ತು ನಿಭಾಯಿಸಬಲ್ಲವರಾಗಿದ್ದರೂ ಇವರಿಗೆ ಅವಕಾಶ ನೀಡಿಲ್ಲ. ಇದರಿಂದ ಸಮಾಜದ ಬಂಧುಗಳಿಗೆ ಅಸಮಾಧಾನವಾಗಿದೆ ಎಂದು ಹೇಳಿದರು.
ಓಲೇಕಾರ್ ಅವರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಾನ್ಯತೆ ನೀಡಿ, ಸಚಿವರನ್ನಾಗಿ ನೇಮಕ ಮಾಡಬೇಕು. ಇಲ್ಲವಾದರೆ ಸಮೀಪಿಸುತ್ತಿರುವ ಜಿಲ್ಲಾ ಪಂಚಾ ಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಿಗೂ ಮುನ್ನ ನಮ್ಮ ಸಮಾಜಕ್ಕಾಗಿರುವ ಅನ್ಯಾಯದ ಬಗ್ಗೆ ಸಮಾಜ ಬಾಂಧವರಿಗೆ ಮನವರಿಕೆ ಮಾಡಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆಂದರು.
ಮುಖಂಡ ಓಂಕಾರಪ್ಪ ಮಾತ ನಾಡಿ, ವಿವಿಧ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿದಂತೆ ನಮ್ಮ ಸಮಾಜವನ್ನು ಪರಿಗಣಿಸಿ, ನಮ್ಮ ಸಮಾಜಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದ ಅವರು, ಒನಕೆ ಓಬವ್ವನ ಇತಿಹಾಸ, ಸಾಧನೆಗಳು ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಸರ್ಕಾರದಿಂದಲೇ ಓಬ್ಬವ್ವನ ಜಯಂತಿ ಆಚರಣೆ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಯ್ಯ, ಹೆಚ್.ಕೆ. ಚನ್ನಪ್ಪ, ತಿಮ್ಮಣ್ಣ, ರುದ್ರಮುನಿ, ದೇವೇಂದ್ರಪ್ಪ, ಚನ್ನಬಸಪ್ಪ ಸೇರಿದಂತೆ ಇತರರು ಇದ್ದರು.