ಶಿಷ್ಯ ವೇತನಕ್ಕಾಗಿ ಪಟ್ಟು ಬಿಡದ ವೈದ್ಯ ವಿದ್ಯಾರ್ಥಿಗಳು

ಬೇಡಿಕೆ ಈಡೇರದಿದ್ದರೆ ಸೋಮವಾರ ತುರ್ತು ಸೇವೆಯ ಸ್ಥಗಿತದ ಎಚ್ಚರ

ದಾವಣಗೆರೆ, ಜು.11- ಶಿಷ್ಯ ವೇತನಕ್ಕೆ ಆಗ್ರಹಿಸಿ ನಗರದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ.

ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಮುಷ್ಕರ ಹೂಡಿರುವ ವಿದ್ಯಾರ್ಥಿಗಳು, ಇಂದು ಸಹ ಕೋವಿಡ್ ಸೇವೆ ಹೊರತುಪಡಿಸಿ ಹೊರ ರೋಗಿಗಳ ವಿಭಾಗದ (ಒಪಿಡಿ) ಎಲ್ಲಾ  ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿಯಾದ ರೇಡಿಯೋಲಜಿ ವಿಭಾಗದ ಮುಖ್ಯಸ್ಥೆ ಡಾ. ಜೀವಿಕ, ಡಾ. ನಾರ್ವೇಕರ್, ಡಾ. ಸಿದ್ದೇಶ್, ಡಾ. ಹರಿಕಿರಣ್ ಭೇಟಿ ನೀಡಿ, ನಿಮ್ಮ ಹಕ್ಕಿಗಾಗಿ ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದ್ದು, ನಮ್ಮ ಸಂಪೂರ್ಣ ಬೆಂಬಲವಿದೆ. ಮುಂದೆಯೂ ಸಹ ಸಾರ್ವಜನಿಕರಿಗೆತೊಂದರೆಯಾಗದಂತೆ ಶಾಂತಿಯುತವಾಗಿ ಹೋರಾಟ ಮಾಡಿ ಎಂದು ತಿಳಿಸಿದರು.

ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೇ ಇದ್ದರೆ ಸೋಮವಾರದಿಂದ ಕೋವಿಡ್ ಸೇವೆ ಹೊರತುಪಡಿಸಿ ತುರ್ತು ಮತ್ತು ಹೆರಿಗೆ ಸೇವೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳನ್ನೂ ಸಹ ಸ್ಥಗಿತಗೊಳಿಸುವುದಾಗಿ ಮುಷ್ಕರ ನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !!